ಜಿಲ್ಲೆ

ಜಿಲ್ಲೆಯಲ್ಲಿ 164 ಜೀತದಾಳುಗಳಿಗೆ ವಿಮುಕ್ತಿ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ 164 ಜೀತದಾಳುಗಳನ್ನು ವಿಮುಕ್ತಿಗೊಳಿಸಲಾಗಿದ್ದು, ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ 157 ಜೀತ ವಿಮುಕ್ತರಿಗೆ ತಲಾ 20 ರೂ.ಗಳಂತೆ 31.40 ಲಕ್ಷ ರೂ.ಗಳು ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ಮಾಹಿತಿ ನೀಡಿದರು.

ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಒಂದು ದಿನದ ಕಾರ್ಯಾಗಾರದಲ್ಲಿ ಜೀತ ಪದ್ಧತಿ ನಿರ್ಮೂಲನೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಮುಕ್ತಗೊಂಡ ಜೀತುದಾಳುಗಳ ಪೈಕಿ ಇಬ್ಬರಿಗೆ ನಿವೇಶನ ನೀಡಲಾಗಿದ್ದು, 43 ಜನರಿಗೆ ಮನೆ ಒದಗಿಸಲಾಗಿದೆ. 53 ಜನರಿಗೆ ಜಾಬ್ ಕಾರ್ಡ್, 156 ಜನರಿಗೆ ಆಧಾರ್ ಹಾಗೂ ಮತದಾನ ಗುರುತಿನ ಚೀಟಿ, 112 ಜನರಿಗೆ ಬ್ಯಾಂಕ್‌ಗಳಿಂದ ಸಾಲ ಧನಸಹಾಯ, ನಾಲ್ವರಿಗೆ 79,200 ರೂಗಳ ಮಾಸಾಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜೀತ ಪದ್ಧತಿ ನಿರ್ಮೂಲನೆಗೆ ಕೈ ಜೋಡಿಸಿ: ಸಮಾಜದಲ್ಲಿ ಸಾಮಾಜಿಕ ಪಿಡುಗಾಗಿರುವ ಜೀತಪದ್ಧತಿಯ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು, ಜಿಲ್ಲೆಯಲ್ಲಿ ಎಲ್ಲಿಯಾದರೂ ಜೀತಪದ್ಧತಿ ಕಂಡುಬಂದರೆ ಅಥವಾ ಇಂಥ ಅನುಮಾನ ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು ಈ ಮೂಲಕ ಜೀತಪದ್ಧತಿ ನಿರ್ಮೂಲನೆಗೆ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಸಿಇಒ ಮನವಿ ಮಾಡಿದರು. ಹಿಂದಿನ ಕಾಲದಲ್ಲಿ ಜೀತ ಪದ್ಧತಿಯು ಆಳವಾಗಿ ಬೇರೂರಿತ್ತು. ಉಳ್ಳವರು ಬಡವರನ್ನು ಸುಲಿಗೆ ಮಾಡುತ್ತಿದ್ದರು, ಆರ್ಥಿಕವಾಗಿ ಸೇರಿ ಎಲ್ಲ ರೀತಿಯಿಂದಲೂ ಶೋಷಣೆ ಮಾಡುತ್ತಿದ್ದರು, ಸ್ವಾತಂತ್ರ್ಯಾನಂತರ ಈ ಪದ್ಧತಿ ಗಣನೀಯವಾಗಿ ಕಡಿಮೆಯಾಗಿದ್ದರೂ ಸಾಮಾಜಿಕ-ಆರ್ಥಿಕ ಅಸಮಾನತೆಗಳಿಂದಾಗಿ ಇಂದಿಗೂ ಜೀತ ಪದ್ಧತಿ ವ್ಯವಸ್ಥೆ ಜೀವಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ಪ್ರಜೆಗೂ ಹಕ್ಕಿದೆ:

ಸಮಾಜದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಾಮಾನ ಹಕ್ಕುಗಳನ್ನು ನೀಡಲಾಗಿದೆ. ಬಲವಂತವಾಗಿ ಯಾರ ಸ್ವಾತಂತ್ರ್ಯವನ್ನು ಕಿತ್ತು ಕೊಳ್ಳಬಾರದು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ಸಂವಿಧಾನದ ಮೂಲ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವು ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರ ಬುನಾದಿಯಾಗಿದೆ ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಜತೆಗೆ ಸ್ನೇಹಿತರಿಗೆ, ಬಂಧುಗಳಿಗೆ ನೆರೆಹೊರೆಯವರಿಗೆ ತಿಳಿಸಿ ಹೇಳಬೇಕು ಎಂದು ಸಿಇಒ ಕೆ.ಅನುರಾಧಾ ಮನವಿ ಮಾಡಿದರು.

ಶಿಕ್ಷಣದಿಂದ ಸಾಧ್ಯ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಜೀತ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯ. ಜೀತ ಪದ್ಧತಿಯ ನಿರ್ಮೂಲನೆಗೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ಜೀತ ಪದ್ದತಿಗೆ ಒತ್ತಾಯಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು. ಜಿಲ್ಲೆಯಲ್ಲಿ ಎಲ್ಲಿಯಾದರೂ ಜೀತ ಪದ್ಧತಿ ವ್ಯವಸ್ಥೆ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಈ ಬಗ್ಗೆ ಯಾರೂ ಹಿಂಜರಿಯಬಾರದು, ಮಾಹಿತಿ ನೀಡಿದವರ ಹೆಸರಿನ ಗೌಪ್ಯ ಕಾಪಾಡಲಾಗುವುದು ಎಂದು ತಿಳಿಸಿದರು.

ಕಾನೂನು ಶಿಕ್ಷೆ: ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜೀವಿಕ ಸಂಘಟನೆಯ ಡಾ.ನಾರಾಯಣಸ್ವಾಮಿ ಮಾತನಾಡಿ, ಜೀತ ಕಾರ್ಮಿಕ ಪದ್ಧತಿ (ರದ್ದತಿ) ಕಾಯ್ದೆ 1976 ಜೀತ ಪದ್ಧತಿ ವ್ಯಾಖ್ಯಾನ, ಜೀತ ಕಾರ್ಮಿಕ ಪದ್ದತಿಗೆ ಒತ್ತಾಯಿಸುವವರ ವಿರುದ್ಧ ಕಾಯ್ದೆಯಡಿ ನಿಗದಿಗೊಳಿಸಿರುವ ಕಾನೂನು ಶಿಕ್ಷೆ, ಜೀತ ವಿಮುಕ್ತರ ಪುನರ್ವಸತಿ ಯೋಜನೆ , ಜೀತ ಕಾರ್ಮಿಕರ ಗುರುತಿಸುವಿಕೆ, ರಕ್ಷಣೆ ಹಾಗೂ ಪುನರ್ವಸತಿ ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಮಾದರಿ ಕಾರ್ಯವಿಧಾನಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳು ಜೀತ ಪದ್ಧತಿ ನಿರ್ಮೂಲನೆಗೆ ಪಣ ತೊಡುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.