ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲೆಯಲ್ಲಿ ಆನೆ ದಾಳಿ ನಿರಂತರವಾಗಿದ್ದು, ಸಂಗಮ ಅರಣ್ಯ ಪ್ರದೇಶದಲ್ಲಿ ಭೂ ವಿವಾದದಿಂದಾಗಿ ನಿಂತಿರುವ ನಾಲ್ಕು ಕಿಮೀ ಉದ್ದದ ಬ್ಯಾರಿಕೇಡ್ ಕಾಮಗಾರಿಯಿಂದ ಜಿಲ್ಲೆಯ ರೈತರು ಪರಿತಪಿಸುವಂತೆ ಆಗಿದೆ.
ಕನಕಪುರ, ರಾಮನಗರ ಮತ್ತು ಚನ್ನಪಟ್ಟಣ ವ್ಯಾಪ್ತಿಯಲ್ಲಿ ಆನೆ ದಾಳಿ ಪ್ರತಿನಿತ್ಯದ ಸುದ್ದಿಯಾಗಿದೆ. ಇದರಿಂದ ರೈತರು ರೋಸಿ ಹೋಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಪ ಹಾಕುತ್ತಿದ್ದಾರೆ. ಆದರೆ ಅತ್ತ ಕಾವೇರಿ ವನ್ಯ ಜೀವಿಧಾಮದ ಸಂಗಮ ವಲಯದಲ್ಲಿನ ಎರಡು ಕಡೆಗಳಲ್ಲಿ ತಲಾ ಎರಡು ಕಿಮೀ ಕಾಮಗಾರಿಗೆ ಭೂ ವಿವಾದ ಉಂಟಾಗಿದ್ದು, ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಜಟಾಪಟಿಯಿಂದಾಗಿ ಬ್ಯಾರಿಕೇಡ್ ನಿರ್ಮಿಸಲು ಆಗದೆ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.
ಎಲ್ಲೆ ಸಮಸ್ಯೆ?: ರಾಮನಗರ ಜಿಲ್ಲೆ ಬನ್ನೇರುಟ್ಟ ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯ ಜೀವಿಧಾಮಗಳಲ್ಲಿ ವ್ಯಾಪಕ ಅರಣ್ಯ ಸಂಪತ್ತು ಹೊಂದಿದೆ. ಹಿಂದಿನಿಂದಲೂ ಕಾವೇರಿ ವನ್ಯಜಿವಿ ಧಾಮದ ಸಂಗಮ ವಲಯದಿಂದ ಕಬ್ಬಾಳು ಅರಣ್ಯ ಪ್ರವೇಶ ಮಾಡುವ ಆನೆಗಳು ಅಲ್ಲಿಂದ ತೆಂಗಿನಕಲ್ಲು ಅರಣ್ಯ, ಚಿಕ್ಕಮಣ್ಣುಗುಡ್ಡೆ, ಹಂದಿಗುಂದಿ, ಕಾಡನಕುಪ್ಪೆ ಪ್ರದೇಶಗಳಿಗೆ ಲಗ್ಗೆ ಇಡುತ್ತವೆ. ಆನೆ ಸಂಚಾರದ ದಾರಿ ಉದ್ದಕ್ಕೂ ಬೆಳೆ ನಾಶ ಮಾಡುತ್ತಾ, ಕೆಲವೊಮ್ಮೆಅಡ್ಡ ಬಂದ ಜನ ಮತ್ತು ಜಾನುವಾರುಗಳ ಪ್ರಾಣ ಹಾನಿ ಮಾಡುತ್ತಾ ಸಾಗುತ್ತವೆ. ಆದರೆ ಇದನ್ನು ತಡೆಯುವ ಉದ್ದೇಶದಿಂದಲೇ ಸರ್ಕಾರ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಾಣ ಮಾಡಿದೆ. ಆದರೆ, ಕನಕಪುರ ತಾಲೂಕಿನ ಚಿಕ್ಕಮುದುಡೆ ಮತ್ತು ದುಂತೂರು ಗ್ರಾಮದ ಬಳಿ ತಲಾ 2 ಕಿಮೀ ದೂರ ಕಾಮಗಾರಿ ಬಾಕಿ ಉಳಿದಿದೆ. ಅರಣ್ಯ ಇಲಾಖೆ ಮತ್ತು ರೆತರ ನಡುವೆ ಇಲ್ಲಿ ಭೂ ವಿವಾದ ಉಂಟಾಗಿದ್ದು, ಈ ಸಂಬಂಧ ಸ್ಥಳಿಯ ಜನಪ್ರತಿನಿಧಿಗಳು, ಅಧಿಕಾರಿಗಳು ನಡೆಸಿದ ಸಂಧಾನವೂ ಯಶಸ್ವಿ ಆಗಲಿಲ್ಲ. ಇದರಿಂದಾಗಿ ಆನೆ ಹಾವಳಿ ವ್ಯಾಪಕವಾಗಿದೆ.
ಸಮಸ್ಯೆ ಬಗೆಹರಿಸಲಿ: ಕನಕಪುರ ತಾಲೂಕಿನ ಚಿಕ್ಕಮುದುಡೆ ಮತ್ತು ದುಂತೂರು ಗ್ರಾಮದ ಬಳಿ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಉಂಟಾಗಿರುವ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ. ಈಗಾಗಲೇ ಈ ಸಂಬಂಧ ಜಿಲ್ಲಾಧಿಕಾರಿ ಅಧಿಕಾರಿಗಳ ಸಭೆ ನಡೆಸಿದ್ದಾರಾದರೂ ಪೂರಕವಾಗಿ ಪರಿಣಾಮ ಬೀರಲಿಲ್ಲ. ಅಲ್ಲದೆ, ಬ್ಯಾರಿಕೇಡ್ ನಿರ್ಮಾಣಕ್ಕಾಗಿ ವಶಪಡಿಸಿಕೊಳ್ಳುವ ಜಮೀನಿನ ರೈತರಿಗೆ ಬದಲಿ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ. ಇಲ್ಲದೇ ಹೋದರೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಅದರಲ್ಲೂ ರಾಮನಗರ, ಕನಕಪುರ, ಚನ್ನಪಟ್ಟಣ ರೈತರು ಸಾಕಷ್ಟು ತೊಂದರೆಗೆ ಒಳಗಾಗಬೇಕಾಗುವುದು ನಿಶ್ಚಿತ.
ಸೋಲಾರ್ ಬೇಲಿ: ಈಗಾಗಲೇ ಅತಿ ಹೆಚ್ಚು ಆನೆ ದಾಳಿಗೆ ಒಳಗಾಗುತ್ತಿರುವ ಗ್ರಾಮಗಳಲ್ಲಿ ರೈತರಿಗೆ ಸೋಲಾರ್ ಬೇಲಿ ನಿರ್ಮಾಣ ಮಾಡಿಕೊಳ್ಳಲು ಬೇಕಾದ ನೆರವನ್ನು ಅರಣ್ಯ ಇಲಾಖೆ ನೀಡಿದ್ದು, ಮತ್ತಷ್ಟು ನೆರವು ನೀಡಲು ಸಿದ್ಧವಾಗಿದೆ. ಜಿಲ್ಲೆಯಲ್ಲಿ 85 ರೈತರು ಸೋಲಾರ್ ಬೇಲಿ ಅಳವಡಿಸಿಕೊಂಡಿದ್ದು, ಮತ್ತಷ್ಟು ಬೇಲಿ ನಿರ್ಮಾಣಕ್ಕೆ ನೆರವು ಪಡೆಯಲು ಒಂದು ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ ಆಗಿವೆ. ಇದರ ಹೊರತಾಗಿಯೂ ಆನೆ ದಾಳಿ ಮಾತ್ರ ನಿರಂತರವಾಗಿದೆ.
ವನ್ಯ ಜೀವಿ ಹಾವಳಿ ತಡೆಯುವ ನಿಟ್ಟಿನಲ್ಲಿ ನಾವು ಸಾಕಷ್ಟು ಪ್ರಯತ್ನ ಮಾಡುತ್ತಲೇ ಇದ್ದೇವೆ. ಇದರ ಹೊರತಾಗಿಯೂ ಆನೆ ದಾಳಿ ನಿಯಂತ್ರಣ ಕಷ್ಟವಾಗಿದೆ. ವಿವಾದಿತ ಜಮೀನಿನ ರೈತರೊಂದಿಗೆ ಮಾತುಕತೆ ನಡೆದಿದೆ. ಜಿಲ್ಲಾಡಳಿತವೂ ಸಭೆ ನಡೆಸಿ ಶ್ರೀವೇ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ.
| ದೇವರಾಜು, ಡಿಎಫ್ಒ ರಾಮನಗರ ಪ್ರಾದೇಶಿಕ ವಿಭಾಗ
ಕಾಡಾನೆ ದಾಳಿಯಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಭತ್ತದ ಗದ್ದೆ, ಬಾಳೆ ತೋಟ, ತೆಂಗು ಬೆಳೆಗಳನ್ನು ನಿರಂತರ ದಾಳಿಯಿಂದ ಕಳೆದುಕೊಂಡಿದ್ದೇವೆ. ಆನೆ ದಾಳಿ ನಿಯಂತ್ರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
| ಚನ್ನಿಗರಾಜು ರೈತ ಕೈಲಾಂಚ