ಜಿಲ್ಲೆ

ವಿವಿಧ ಜಿಲ್ಲೆಗಳಲ್ಲಿರುವ ಬಡ್ತಿ ತಾರತಮ್ಯ ನಿವಾರಿಸಿ

Ramanagara

ರಾಮನಗರ: ಕಂದಾಯ ಇಲಾಖೆ ನೌಕರರ ಸಮಸ್ಯೆ ಬಗೆಹರಿಸುವ ಜತೆಗೆ ಮುಂಬಡ್ತಿ ನೀಡುವ ವಿಷಯದಲ್ಲಿ ರಾಜ್ಯ ಸಂಘ ಹೋರಾಟ ನಡೆಸುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಸ್.ಕೃಷ್ಣಮೂರ್ತಿ ತಿಳಿಸಿದರು.

ನಗರದ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಕಂದಾಯ ಇಲಾಖೆ ನೌಕರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಡ್ತಿ ನೀಡುವ ವಿಷಯದಲ್ಲಿ ತಾರತಮ್ಯವಿದೆ. ಇದನ್ನು ಹೋಗಲಾಡಿಸಲು ಆಯುಕ್ತಾಲಯ ರಚನೆ ಮಾಡಲು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದರು.

ಕಳೆದ 8 ವರ್ಷಗಳಿಂದ ಉಪ ತಹಸೀಲ್ದಾರ್ ಹುದ್ದೆಯಿಂದ ತಹಸೀಲ್ದಾರ್ ಹುದ್ದೆಗೆ ಬಡ್ತಿ ನೀಡುವ ಕೆಲಸ ಆಗಿಲ್ಲ. ಗ್ರಾಮ ಸಹಾಯಕರಿಗೆ ನೀಡುತ್ತಿರುವ ವೇತನವನ್ನು 18 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಹೋಬಳಿ ವಿಸ್ತರಣೆ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ರಾಜಸ್ವ ನಿರೀಕ್ಷಕರ ಹುದ್ದೆಗಳನ್ನು ಸೃಷ್ಟಿಸಿ ನೌಕರರ ಮೇಲಿನ ಒತ್ತಡ ನಿವಾರಿಸುವಂತೆ ಸರ್ಕಾರದ ಕಾರ್ಯದರ್ಶಿಗಳ ಜತೆ ಚರ್ಚೆ ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಕೆ. ಬೈರಲಿಂಗಯ್ಯ ಮಾತನಾಡಿ, ಈ ಹಿಂದೆ ಅಧ್ಯಕ್ಷರಾಗಿದ್ದ ಮರಿದೇವರು ಕಂದಾಯ ಇಲಾಖೆಯಲ್ಲಿ ಸಂಘಟನೆ ಮಾಡಿ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಹಾಲಿ ಅಧ್ಯಕ್ಷ ಎನ್. ರಮೇಶ್ ಸಹ ಸಂಘಟನೆಗೆ ಮರುಜೀವ ನೀಡಿ ಜಿಲ್ಲೆಯಲ್ಲಿ ಸಂಘಟನೆ ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನ ಮಾಡುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್. ರಮೇಶ್ ಮಾತನಾಡಿ, 1993ರಿಂದ ನೌಕರರಿಗೆ ಯಾವುದೇ ಪದೋನ್ನತಿ ಸಿಕ್ಕಿರಲಿಲ್ಲ. ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸಹಕಾರದಿಂದ ನೌಕರರಿಗೆ ಬಡ್ತಿ ಸಿಗುವಂತಾಯಿತು. ಜಿಲ್ಲೆಯಲ್ಲಿ ಖಾಲಿಯಿರುವ 67 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದ್ದೆಗಳಿಗೆ ನೇರ ನೇಮಕಾತಿ ಮಾಡಿ ನೌಕರರ ಒತ್ತಡ ಕಡಿಮೆ ಮಾಡಬೇಕು. ಆರೋಗ್ಯ ವಿಮೆ ಸೌಲಭ್ಯ ನೀಡಬೇಕು. ಬೆಳೆ ಸಮೀಕ್ಷೆ ಮಾಡುವಾಗ ಕೃಷಿ ಇಲಾಖೆ ಅಧಿಕಾರಿಗಳ ಒತ್ತಡವಿದ್ದು. ತಾಲೂಕುವಾರು ಗುರಿ ನಿಗದಿ ಮಾಡಬೇಕು. ಚುನಾವಣಾ ಕೆಲಸದಲ್ಲಿ ರಜಾ ದಿನವೂ ಸಹ ಕೆಲಸ ನಿರ್ವಹಿಸುತ್ತೇವೆ. ಆದರೆ ಯಾವುದೇ ಗೌರವ ಧನ ಸಿಗುತ್ತಿಲ್ಲ. ಗೌರವಧನ ನೀಡುವಂತೆ ರಾಜ್ಯ ಸಂಘ ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.

ಅರಣ್ಯ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷ ಬಸವರಾಜು, ರಾಜ್ಯ ಕಂದಾಯ ಇಲಾಖಾ ನೌಕರರ ಗೌರವಾಧ್ಯಕ್ಷ ಸಿದ್ದರಾಜು, ಹಿರಿಯ ಉಪಾಧ್ಯಕ್ಷ ಬಿ.ಆರ್. ರಾಜಶೇಖರಮೂರ್ತಿ, ಉಪಾಧ್ಯಕ್ಷ ಎನ್.ನಂದೀಶ್, ಸಂಘಟನಾ ಕಾರ್ಯದರ್ಶಿ ರವಿಕುಮಾರ್, ವಿಭಾಗೀಯ ಉಪಾಧ್ಯಕ್ಷ ಎಂ.ಹರ್ಷ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಜಗದೀಶ್​ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಇದ್ದರು.

ಜಿಲ್ಲೆಯ ನಾಲ್ಕು ತಾಲೂಕುಗಳ ಕಂದಾಯ ಇಲಾಖೆ ನೌಕರರಿಗೆ ಸುಲಭ ದರದಲ್ಲಿ ನಿವೇಶನ ಹಂಚಿಕೆ ಮಾಡಲು 45 ಎಕರೆಯಲ್ಲಿ ನಿವೇಶನಗಳನ್ನು ಗುರ್ತಿಸುವ ಕೆಲಸವನ್ನು ಜಿಲ್ಲಾ ಸಂಘ ಮಾಡಿದ್ದು, ನೌಕರರು ಇದರ ಸದುಪಯೋಗ ಪಡೆದುಕೊಳ್ಳಬೇಕು. | ಎನ್.ರಮೇಶ್ ಜಿಲ್ಲಾಧ್ಯಕ್ಷ, ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘ, ರಾಮನಗರ