ಜಿಲ್ಲೆ

ಶೋಷಿತರ ನಡುವೆ ಅಸಹನೆ ಹೋಗಲಾಡಿಸಿ

ತುಮಕೂರು ಡೆಸ್ಕ್

ಮಹಾ ಅಧಿವೇಶನದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಕರೆ | ಮೀಸಲಾತಿ ಕಟ್ಟಕಡೆಯ ವ್ಯಕ್ತಿಗೂ ತಲುಪಲಿ

ವಿಜಯವಾಣಿ ಸುದ್ದಿಜಾಲ ತುಮಕೂರು
ಪ್ರಸ್ತುತ ದಿನದಲ್ಲಿ ಮೀಸಲಾತಿಯನ್ನು ಕೆಲವೇ ಜಾತಿಗಳ ಕಬಳಿಸುತ್ತಿವೆ, ಪರಿಶಿಷ್ಟರ 101 ಜಾತಿಗಳಲ್ಲಿ 101ನೇ ಜಾತಿಗೂ ಅದರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಲಭ್ಯವಾಗಬೇಕು. ಎಲ್ಲರನ್ನು ಒಳಗೊಂಡಾಗ ಮಾತ್ರ ಸಮಾನತೆ ಸಾಧ್ಯ ಎಂಬುದು ಅಂಬೇಡ್ಕರ್​ ಆಶಯವಾಗಿತ್ತು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.


ನಗರದ ಎಂಪ್ರೆಸ್​ ಶಾಲೆ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್​ ವಾದ) ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಉದ್ಘಾಟಿಸಿ ಮಾತನಾಡಿ, ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡಗಳಲ್ಲಿಯೂ ಮೀಸಲಾತಿ ಅಲ್ಲಿನ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಇದನ್ನೇ ಅಂಬೇಡ್ಕರ್​ ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಎಂದು ಪ್ರತಿಪಾದಿಸಿದ್ದರು ಎಂದರು.


ದಲಿತ ಸಂಘರ್ಷ ಸಮಿತಿ ಹುಟ್ಟಿದ ಸಂದರ್ಭಕ್ಕೂ ಇಂದಿಗೂ ಸಾಕಷ್ಟು ವ್ಯತ್ಯಾಸವಿದ್ದು, ಶೋಷಿತರ ನಡುವೆ ಇರುವ ಅಸಹನೆ ಹೋಗಲಾಡಿಸಿ, ಸೌಹಾರ್ಧತೆ ಮೂಡಿಸದಿದ್ದರೆ ಸಮ ಸಮಾಜ ನಿಮಾರ್ಣದ ದಲಿತ ಸಂಘರ್ಷ ಸಮಿತಿಯ ಕನಸು ನನಸಾಗಲು ಸಾಧ್ಯವಿಲ್ಲ. ದಸಂಸ ಹುಟ್ಟಿದ 1976ರ 20ನೇ ಶತಮಾನದಲ್ಲಿ ಸಾಮಾಜಿಕ ಸಮಸ್ಯೆಗಳಾದ ಅಸ್ಪೃಷ್ಯತೆ, ಮಹಿಳಾ ದೌರ್ಜನ್ಯ, ವರದಕ್ಷಿಣೆ ಇಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಮಾಡಬೇಕಾಗಿತ್ತು ಎಂದರು.


21 ಶತಮಾನದಲ್ಲಿ ಜಾಗತೀಕರಣನದ ಫಲವಾಗಿ ಅರ್ಥಿಕ ಸುಧಾರಣೆಯತ್ತ ಹೋರಾಟ ರೂಪಿಸಬೇಕಾಗಿದೆ. ಬಂಡವಾಳಶಾಹಿಗಳ ವಿರುದ್ಧ ಸಂಘಟಿತರಾಗಿ ಹೋರಾಟ ರೂಪಿಸಬೇಕಾಗಿದೆ. ಮಾನವೀಯತೆಯನ್ನು ನುಂಗಿ ಹಾಕಿ, ಮತೀಯತೆ, ಮಠೀಯತೆ ವಿರುದ್ಧ ಹೋರಾಡಬೇಕಿದೆ. ಜಾತಿವಿನಾಶದ ಪರವಾಗಿ ಹೋರಾಡುತ್ತಿದ್ದ ಜನರು, ಜಾತಿಯತೆಯ ವಿರುದ್ಧ ಗಟ್ಟಿಯಾದ ಹೆಜ್ಜೆ ಇಡಬೇಕಾದ ಅನಿವಾರ್ಯತೆಯಿದೆ ಎಂದರು. ರಾಜಕೀಯ ಪಕ್ಷಗಳಲ್ಲಿ ಕವಲುಗಳು ಇರುವಂತೆ ದಲಿತ ಸಂಘರ್ಷ ಸಮಿತಿಯಲ್ಲಿಯೂ ಹಲವಾರು ಕವಲುಗಳಿವೆ. ಆದರೆ ಅವೆಲ್ಲವುಗಳ ಗುರಿ ಸಮ ಸಮಾಜ ನಿಮಾರ್ಣವೇ ಆಗಿದೆ. ನಾಯಕನೆಂದರೆ ಮೈಕ್​ ಹಿಡಿದು ಭಾಷಣ ಬಿಗಿಯುವುದಲ್ಲ. ಮನಸ್ಸುಗಳನ್ನು ಕಟ್ಟುವವನೇ ನಿಜವಾದ ಲೀಡರ್​. ಪ್ರಜಾಪ್ರಭುತ್ವದ ಮೇಲೆ ಸರ್ವಾಧಿಕಾರ ಸವಾರಿ ಮಾಡುತ್ತಿರುವ ಈ ಕಾಲದಲ್ಲಿ ಎಲ್ಲರನ್ನು ಒಳಗೊಂಡ ಸಂಘಟನೆ ಕಟ್ಟುವುದು ನಿಜಕ್ಕೂ ಸವಾಲಿನ ಕೆಲಸ ಎಂದರು.

ಗಾಂಧಿ ಮತ್ತು ಅಂಬೇಡ್ಕರ್​ ನಮ್ಮ ಮುಂದಿರುವ ಪ್ರಜ್ಞೆಗಳು. ಗಾಂಧಿ ಸೂಟು, ಬೂಟು ಹಾಕುವ ಸಮುದಾಯದಲ್ಲಿ ಹುಟ್ಟಿ, ತನ್ನಂತಹವರಿಂದ ಅನ್ಯಾಯಕ್ಕೆ ಒಳಗಾದ ಜನರ ಜತೆ ಅರೆ ಬೆತ್ತಲೆಯಾಗಿ ನಿಂತು ಪಾಪ ಕಳೆದುಕೊಂಡರೆ, ಅರೆಬೆತ್ತಲೆ ಸಮುದಾಯದಲ್ಲಿ ಹುಟ್ಟಿದ ಅಂಬೇಡ್ಕರ್​ ಸೂಟು ಬೂಟು ಹಾಕುವ ಮೂಲಕ ಸಮುದಾಯದ ಜಾಗೃತ ಪ್ರಜ್ಞೆಯ ಪ್ರತಿಕವಾಗಿ ಕಂಗೊಳಿಸುತ್ತಾರೆ. ಬುದ್ಧ, ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್​, ಕುದ್ಮಲ್​ ರಂಗರಾವ್​ ಗಾಂಧಿಯ ಸಾಲಿಗೆ ಸೇರುತ್ತಾರೆ. ಸಾಮಾಜಿಕ ಶ್ರೇಣಿಕರಣ ಹಾಗೂ ಸಂಪತ್ತಿನ ಕ್ರೋಡಿಕರಣದ ವಿರುದ್ಧ ಹೋರಾಡಲು ದಸಂಸ ತನ್ನಲ್ಲಿನ ದಲಿತ ಪ್ರಜ್ಞೆಯನ್ನು ಮರು ವ್ಯಾಖ್ಯಾನಿಸಿಕೊಳ್ಳಬೇಕಿದೆ ಎಂದು ಹೇಳಿದರು.


ದಲಿತ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಪತ್ನಿ ಇಂದಿರಾ ಕೃಷ್ಣಪ್ಪ ಮಾತನಾಡಿ, ಇಂದಿನ ರಾಜ್ಯಮಟ್ಟದ ಮಹಾ ಅಧಿವೇಶನ 50 ವರ್ಷಗಳ ದಸಂಸದ ಇದುವರೆಗಿನ ಸಾಧನೆ ಮತ್ತು ಮುಂದಿನ ನಡೆಗಳ ಕುರಿತು ಪುನರಾವಲೋಕನ ಮಾಡಿಕೊಳ್ಳುವ ವೇದಿಕೆಯಾಗಿದೆ. ನಾವು ನಡೆದು ಬಂದ ದಾರಿಯನ್ನು ಅವಲೋಕಿಸುತ್ತಲೇ, ನಮ್ಮ ಮುಂದಿರುವ ಸವಾಲು ಗಳನ್ನು ಮೆಟ್ಟಿನಿಲ್ಲಲ್ಲು ದಾರಿ ಕಂಡುಕೊಳ್ಳಬೇಕಿದೆ. ಅರ್ಥಿಕ ಅಸಮಾನತೆ, ಏಕಮುಖ ಚಲನೆ, ಸಂವಿಧಾನದ ವಿರೋಧಿ ನಡೆಗಳು, ಮನುವಾದದ ಸ್ಥಾಪನೆಯ ವಿರುದ್ದ ಎಲ್ಲರನ್ನು ಸಂಘಟಿಸಿ ಮುನ್ನೆಡೆಸುವ ಸವಾಲು ನಮ್ಮ ಮುಂದಿದೆ ಎಂದರು.


ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್​, ಮುಖಂಡರಾದ ಕೆ.ದೊರೆರಾಜು, ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ರಾಮಚಂದ್ರಪ್ಪ, ಹಿರಿಯ ದಸಂಸ ಮುಖಂಡ ಕುಂದೂರು ತಿಮ್ಮಯ್ಯ, ಡಾ.ಬಸವರಾಜು, ವಿರೂಪಾಕ್ಷ ಡ್ಯಾಗೇರಹಳ್ಳಿ, ಮುರುಳಿ ಕುಂದೂರು, ಚೇಳೂರು ಶಿವನಂಜಪ್ಪ ಮತ್ತಿತರರು ಇದ್ದರು.