ಕೊಪ್ಪಳದಲ್ಲಿ ಡಿಸಿ ವಿಕಾಸ್ ಕಿಶೋರ್‌ಗೆ ಎಸ್‌ಡಿಪಿಐ ಜಿಲ್ಲಾ ಪದಾಧಿಕಾರಿಗಳು ಗುರುವಾರ ಮನವಿ ಸಲ್ಲಿಸಿದರು.  
ಜಿಲ್ಲೆ

ಅರ್ಹ ಫಲಾನುಭವಿಗಳಿಗೆ ನೀಡಿ ಸೂರು: ಕೊಪ್ಪಳದಲ್ಲಿ ಡಿಸಿಗೆ ಎಸ್‌ಡಿಪಿಐ ಪದಾಧಿಕಾರಿಗಳ ಮನವಿ

ಕೊಪ್ಪಳ: ಗಂಗಾವತಿ ನಗರದ ಹೊರವಲಯದ ಹೊಸಳ್ಳಿ ರಸ್ತೆಯಲ್ಲಿನ ಆಶ್ರಯ ನಿವೇಶನಗಳನ್ನು ಅನರ್ಹರಿಗೆ ಹಂಚಿಕೆ ಮಾಡಿದ್ದು, ಕೂಡಲೇ ಆಯ್ಕೆಪಟ್ಟಿ ರದ್ದುಪಡಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ಜಿಲ್ಲಾ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್‌ಗೆ ಮನವಿ ಸಲ್ಲಿಸಿದರು.

ಸರ್ವೇ ನಂ. 73/1, 73/2, 74 ಮತ್ತು 75ರಲ್ಲಿ ಆಶ್ರಯ ನಗರ ವಸತಿ ಯೋಜನೆಯಡಿ 16.9 ಎಕರೆಯಲ್ಲಿ ಆಶ್ರಯ ಮನೆ ಹಾಗೂ ನಿವೇಶನಗಳನ್ನು ರಚಿಸಲಾಗಿದೆ. 15 ವರ್ಷದಿಂದ ಹಂಚಿಕೆ ಮಾಡಿಲ್ಲ. ಈಗ ತರಾತುರಿಯಲ್ಲಿ ತಮಗೆ ಬೇಕಾದವರಿಗೆ ಹಂಚಿಕೆ ಮಾಡಲು ಅಧಿಕಾರಿಗಳು ಪಟ್ಟಿ ತಯಾರಿಸಿದ್ದಾರೆ. ರಾತ್ರೋರಾತ್ರಿ ಪಟ್ಟಿ ಸಿದ್ಧಪಡಿಸಿದ್ದು, ಹಲವು ಅನುಮಾನ ಮೂಡಲು ಕಾರಣವಾಗಿದೆ. ಈಗಾಗಲೇ ಮನೆ ಹೊಂದಿದವರ ಹೆಸರನ್ನೂ ಸೇರಿಸಿದ್ದು, ಅರ್ಹರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ನಗರಸಭೆಯಿಂದ ಸಲ್ಲಿಕೆಯಾದ ಆಯ್ಕೆ ಪಟ್ಟಿಯನ್ನು ರದ್ದುಪಡಿಸಬೇಕು. ಬಡವರು, ನಿರ್ಗತಿಕರು, ಅಂಗವಿಕಲರು ಹಾಗೂ ವಿಧವೆಯರಿಗೆ ಆದ್ಯತೆ ಅನುಸಾರ ನಿವೇಶನ ಹಂಚಿಕೆ ಮಾಡಬೇಕು. ಹಣದಾಸೆಗೆ ಅನರ್ಹರ ಪಟ್ಟಿ ತಯಾರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವಸತಿ ಇಲಾಖೆ ಅಧೀನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ನಡೆಯಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳುತ್ತೇವೆಂದು ತಿಳಿಸಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಹಮದ್, ಪದಾಧಿಕಾರಿಗಳಾದ ಜಹೀರ್ ಅಬ್ಬಾಸ್, ಸಲೀಂ ಮನಿಯಾರ್, ಗೌಸ್ ಎಚ್., ಸೈಯದ್ ಸಲೀಂ ಖಾದ್ರಿ ಇತರರಿದ್ದರು.