ಬೆಂಗಳೂರು: ಉದ್ಯೋಗ ಆಧಾರಿತ ಪ್ರೋತ್ಸಾಹ ಧನ (ಇಎಲ್‌ಐ) ನೂತನ ಯೋಜನೆಗೆ ಕೇಂದ್ರ ಸರ್ಕಾರದ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದ್ದು, ಆಗಸ್ಟ್‌ನಿಂದ ಜಾರಿಗೆ ಬರಲಿರುವ ಯೋಜನೆ ಮೂಲಕ ಹೆಚ್ಚು ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತೆ ಅಧಿಕಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಆರ್.ಆರ್.ನಗರ ವಲಯ ಕಚೇರಿಯ ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತ ಬಾಲಕೃಷ್ಣ ನಾಯಕ ತಿಳಿಸಿದರು.
ನಗರದ ಪಿಎಫ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಂಪನಿ ಅಥವಾ ಸಂಸ್ಥೆಯಲ್ಲಿ ಮೊದಲ ಬಾರಿ ಉದ್ಯೋಗಕ್ಕೆ ಸೇರುವ ಉದ್ಯೋಗಿಗೆ ಈ ಯೋಜನೆ ಅನ್ವಯವಾಗಲಿದೆ. ಇದರಡಿ ಕೇಂದ್ರ ಸರ್ಕಾರವು ಎರಡು ಕಂತುಗಳಲ್ಲಿ ಗರಿಷ್ಠ 15 ಸಾವಿರ ರೂ. ಪ್ರೋತ್ಸಾಹ ಧನ ನೀಡಲಿದೆ. ಯೋಜನೆ ಮೂಲಕ 3.5 ಕೋಟಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದರು.
ಉದ್ಯೋಗದಾತರಿಗೂ ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ ಎರಡು ವರ್ಷಗಳವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಉತ್ಪಾದನಾ ವಲಯಕ್ಕೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತ್ರತ ಪ್ರಯೋಜನಗಳನ್ನು ನೀಡಲಾಗುವುದು ಎಂದು ಹೇಳಿದರು.
ಮೊದಲ ಬಾರಿ ಕೆಲಸಕ್ಕೆ ಸೇರುವ ಇಪಿಎಫ್‌ಒನಲ್ಲಿ ನೋಂದಾಯಿತ ಉದ್ಯೋಗಿಗಳಿಗೆ ಗರಿಷ್ಠ 15 ಸಾವಿರ ರೂ. ಒಂದು ತಿಂಗಳ ಇಪಿಎಫ್ ವೇತನವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. 1 ಲಕ್ಷ ರೂ.ವರೆಗಿನ ವೇತನ ಹೊಂದಿರುವ ಉದ್ಯೋಗಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಮೊದಲ ಕಂತನ್ನು 6 ತಿಂಗಳ ಸೇವೆಯ ನಂತರ ಮತ್ತು 2ನೇ ಕಂತನ್ನು 12 ತಿಂಗಳ ಸೇವೆಯ ನಂತರ ನೀಡಲಾಗುತ್ತದೆ. ಇದಕ್ಕಾಗಿ ಉದ್ಯೋಗಿಯು ಆನ್‌ಲೈನ್ ಮೂಲಕ ನೀಡಲಾಗುವ ಆರ್ಥಿಕ ಸಾಕ್ಷರತೆ ತರಬೇತಿ ಪೂರ್ಣಗೊಳಿಸಬೇಕು.
ಉದ್ಯೋಗದಾತರಿಗೆ ಬೆಂಬಲ ನೀಡಲು ಪ್ರೋತ್ಸಾಹಧನ ಪಡೆಯುವ ಅವಕಾಶ ನೀಡಲಾಗಿದೆ. ಕನಿಷ್ಠ ಆರು ತಿಂಗಳವರೆಗೆ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರ್ಕಾರ ಎರಡು ವರ್ಷಗಳವರೆಗೆ ತಿಂಗಳಿಗೆ ಮೂರು ಸಾವಿರ ರೂ. ವರೆಗೆ ಪ್ರೋತ್ಸಾಹಧನ ನೀಡಲಿದೆ. ಇಪಿಎಫ್‌ಒ ನೋಂದಾಯಿತ ಸಂಸ್ಥೆಗಳು 50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಕನಿಷ್ಠ ಇಬ್ಬರು ಹೆಚ್ಚುವರಿ ಉದ್ಯೋಗಿಗಳನ್ನು ಅಥವಾ 50 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಐದು ಹೆಚ್ಚುವರಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು,
ಪ್ರಾದೇಶಿಕ ಆಯುಕ್ತ ವೆಂಕಟ ಸುಬ್ಬಯ್ಯ ಮತ್ತು ಸಹಾಯಕ ಪಿಫ್ ಆಯುಕ್ತ ಸೂರಜ್ ಕುಮಾರ್ ಇದ್ದರು.