ಆರ್.ತುಳಸಿಕುಮಾರ್
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತಲುಪಲು ಹಾಲಿ ಬಳಕೆಯಲ್ಲಿರುವ ಏರ್‌ಪೋರ್ಟ್ ರೋಡ್‌ನಲ್ಲಿ (ಬಳ್ಳಾರಿ ರಸ್ತೆ) ವಾಹನ ದಟ್ಟಣೆ ಹೆಚ್ಚುತ್ತಿದೆ. ಈ ರಸ್ತೆ ಮೇಲಿನ ಒತ್ತಡ ನಿವಾರಿಸಲು ಗುರುತಿಸಲಾಗಿರುವ ಪರ್ಯಾಯ ಮಾರ್ಗದಲ್ಲಿ ಎರಡು ಎಲಿವೇಟೆಡ್ ಮಾರ್ಗ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ.
ಸದ್ಯ ನಗರದ ರಿಂಗ್ ರಸ್ತೆಯಿಂದ ಏರ್‌ಪೋರ್ಟ್ ತಲುಪಲು ಹೆಣ್ಣೂರು - ಬಾಗಲೂರು - ಮೈಲನಹಳ್ಳಿ ರಸ್ತೆಯು ಪರ್ಯಾಯ ರಸ್ತೆಯಾಗಿ ಕಾರ್ಯಾಚರಣೆಯಲ್ಲಿದೆ. ಇದರ ಜತೆಗೆ ನಾಗವಾರ - ಥಣಿಸಂದ್ರ - ಹೆಗಡೆನಗರ - ರೇವಾ ಕಾಲೇಜ್ ರಸ್ತೆಯನ್ನೂ ಪರ್ಯಾಯ ರಸ್ತೆಯೆಂದೇ ಪರಿಗಣಿಸಲಾಗಿದೆ. ಈ ಎರಡೂ ಮಾರ್ಗಗಳು ಬಳ್ಳಾರಿ ರಸ್ತೆ ಮೂಲಕ ಸಾಗುವ ಏರ್‌ಪೋರ್ಟ್ ರೋಡ್‌ನಲ್ಲಿ ಸಂಚಾರ ದಟ್ಟಣೆಯನ್ನು ಸ್ವಲ್ಪಮಟ್ಟಿಗೆ ನಿವಾರಿಸುತ್ತಿದೆ. ಆದರೆ, ವಾರಾಂತ್ಯ ಹಾಗೂ ಹಬ್ಬ ಹರಿದಿನಗಳಲ್ಲಿ ಏರ್‌ಪೋರ್ಟ್ ರೋಡ್‌ನಲ್ಲಿ ಆಗಾಗ್ಗೆ ಸಂಚಾರ ವ್ಯತ್ಯಯವಾಗುತ್ತಿದೆ. ಇದರಿಂದ ಹಲವು ಪ್ರಯಾಣಿಕರು ಏರ್‌ಪೋರ್ಟ್ ತಲುಪಲು ಅಡ್ಡಿಯಾಗುತ್ತಿದ್ದು, ಕೆಲವೊಮ್ಮೆ ವಿಮಾನ ತಪ್ಪಿಸಿಕೊಳ್ಳುತ್ತಿದ್ದಾರೆ. ಏರ್‌ಪೋರ್ಟ್ ರೋಡ್‌ನಲ್ಲಿ ಟ್ರಾಫಿಕ್ ನಿರ್ವಹಣೆಯನ್ನು ಇನ್ನಷ್ಟು ಸುಗಮಗೊಳಿಸುವ ಕಾರಣಕ್ಕಾಗಿ ಪರ್ಯಾಯ ರಸ್ತೆಯಲ್ಲಿ ಎಲಿವೇಟೆಡ್ ಮಾರ್ಗ ನಿರ್ಮಿಸಿ ಪರಿಹಾರ ಕಂಡುಕೊಳ್ಳಲು ಪಾಲಿಕೆ ಚಿಂತನೆಯಾಗಿದೆ.
ತಲಾ 15 ಕಿ.ಮೀ. ಉದ್ದದ ಮಾರ್ಗ:
ಪರ್ಯಾಯ ಮಾರ್ಗದ ಎರಡೂ ರಸ್ತೆಗಳಲ್ಲಿ ತಲಾ 15 ಕಿ.ಮೀ. ಉದ್ದದಷ್ಟು ಎಲಿವೇಟೆಡ್ ರಸ್ತೆಯನ್ನು ನಿರ್ಮಿಸಲು ಪ್ರಸ್ತಾಪ ಇದೆ. ಜತೆಗೆ ಎರಡೂ ದಿಕ್ಕಿನಿಂದ ತಲಾ 3 ಪಥವುಳ್ಳ ಒಟ್ಟು ಆರು ಪಥ ಇರಲಿದೆ. ಇದರಿಂದ ಏರ್‌ಪೋರ್ಟ್‌ಗೆ ಸುಲಭವಾಗಿ ಬೇಗನೆ ತಲುಪಲು ಸಹಕಾರಿಯಾಗಲಿದೆ. ಹೆಣ್ಣೂರು - ಕಣ್ಣೂರು - ಬಾಗಲೂರು -ಮೈಲನಹಳ್ಳಿ - ಚಕ್ಕನಹಳ್ಳಿ - ಏರ್‌ಪೋರ್ಟ್ ಮಾಗದಲ್ಲಿ ಬಾಗಲೂರು ಜಂಕ್ಷನ್‌ವರೆಗೆ ಮೊದಲ ಎಲಿವೇಟೆಡ್ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ಅರ್ಧದಷ್ಟು ಭಾಗ ಮಾತ್ರ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದರೂ, ಏರ್‌ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ತಗ್ಗಿಸಲು ಪಾಲಿಕೆ ಗಡಿ ಆಚೆಗೂ ಕಾಮಗಾರಿ ಕೈಗೊಳ್ಳಲಾಗುತ್ತದೆ.
ಇನ್ನೊಂದು ಪರ್ಯಾಯ ಮಾರ್ಗವಾಗಿರುವ ನಾಗವಾರ - ಥಣಿಸಂದ್ರ - ಹೆಗಡೆನಗರ - ರೇವಾ ಕಾಲೇಜ್ ರಸ್ತೆಯಲ್ಲಿ ಬಾಗಲೂರು ಕ್ರಾಸ್‌ವರೆಗೆ ಎಲಿವೇಟೆಡ್ ರಸ್ತೆ ಇರಲಿದೆ. ಈ ರಸ್ತೆಯಲ್ಲಿ ನಾಲ್ಕು ಕಡೆಗಳಲ್ಲಿ ಮಾತ್ರ ವಾಹನ ಪ್ರವೇಶ/ನಿರ್ಗಮನಕ್ಕೆ ಅವಕಾಶ ಇರಲಿದೆ. ಬಾಗಲೂರು ಕ್ರಾಸ್‌ನಲ್ಲಿ ಎರಡೂ ದಿಕ್ಕಿಗೂ ಸ್ವಲ್ಪದೂರ ಅಪ್ ರಾಂಪ್/ಡೌನ್ ರಾಂಪ್ ಸೌಲಭ್ಯ ಕಲ್ಪಿಸಲಾಗುತ್ತದೆ. ಎಲಿವೇಟೆಡ್ ರಸ್ತೆಯಲ್ಲಿ ಏರ್‌ಪೋರ್ಟ್‌ನತ್ತ ಪ್ರಯಾಣಿಸುವವರು ಸಿಗ್ನಲ್ ಫ್ರೀ ಮಾದರಿಯಲ್ಲಿ ಸಾಗಬಹುದಾಗಿದ್ದು, ಕೆಳ ಭಾಗದಲ್ಲಿ ಸ್ಥಳೀಯ ಪ್ರದೇಶಗಳತ್ತ ಸಂಚರಿಸಲು ಅವಕಾಶ ಇರಲಿದೆ. ಇದರಿಂದ ಸಂಚಾರ ನಿರ್ವಹಣೆ ಸುಲಭಗೊಂಡು ವಾಹನ ದಟ್ಟಣೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಕೆಳಸೇತುವೆಯಿಂದ ಸಮಸ್ಯೆ ಸೃಷ್ಟಿ:
ಹಾಲಿ ಪರ್ಯಾಯ ಮಾರ್ಗದ ಎರಡೂ ರಸ್ತೆಗಳಲ್ಲಿ ರೈಲ್ವೆ ಕೆಳಸೇತುವೆ ಇದ್ದು, ಈ ಸ್ಥಳದಲ್ಲಿ ವಾಹನ ಸಂಚಾರ ನಿಧಾನಗೊಳ್ಳುತ್ತಿದೆ. ಜತೆಗೆ ಮಳೆಗಾಲದಲ್ಲಿ ನೀರು ಸಂಗ್ರಹಗೊಂಡು ಸಂಚಾರ ಹಳಿತಪ್ಪುತ್ತಿದೆ. ಟ್ರಾಫಿಕ್ ಪೊಲೀಸರು ಮುತುವರ್ಜಿ ವಹಿಸಿದರೂ ಸಮಸ್ಯೆ ಪೂರ್ಣವಾಗಿ ನಿವಾರಣೆಯಾಗಿಲ್ಲ. ಅದರಲ್ಲೂ ಹೆಣ್ಣೂರು ಮಾರ್ಗದಲ್ಲಿ ಕೊತ್ತನೂರು ಬಳಿಯಿರುವ ರೈಲ್ವೆ ಅಂಡರ್‌ಪಾಸ್ ಕಿರಿದಾಗಿದ್ದು, ನಿತ್ಯವೂ ದಟ್ಟಣೆ ಅವಧಿಯಲ್ಲಿ ಟ್ರಾಫಿಕ್ ಹಳಿತಪ್ಪುತ್ತಿದೆ. ದಶಕದಿಂದಿರುವ ಈ ಸಮಸ್ಯೆ ಇನ್ನೂ ನಿವಾರಣೆಯಾಗದೆ ನಾಗರಿಕರು ಬವಣೆಗೊಳಗಾಗಿದ್ದಾರೆ. ಎಲಿವೇಟೆಡ್ ರಸ್ತೆ ನಿರ್ಮಾಣವಾದಲ್ಲಿ ಜನರಿಗೆ ರಿಲೀಫ್ ಸಿಗಬಹುದು.
ಏರ್‌ಪೋರ್ಟ್‌ಗೆ ತೆರಳುವವರಿಗೆ ಹಾಲಿ ರಸ್ತೆ ಸಂಪರ್ಕ ಕೊರತೆ ಎದ್ದುಕಾಣುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಕರೆಯಲ್ಪಡುತ್ತಿದ್ದರೂ, ವಿಶ್ವದರ್ಜೆ ರಸ್ತೆ ಸೌಕರ್ಯ ಇಲ್ಲದೆ ಸಮಸ್ಯೆಯಾಗಿದೆ. ಹಾಲಿ ರಸ್ತೆಗಳು ಗುಂಡಿಮಯವಾಗಿದ್ದು, ತೇಪೆ ಹಾಕುವ ಕೆಲಸ ಮಾತ್ರ ನಡೆದಿದೆ. ಇದರ ಬದಲು ಶಾಶ್ವತ ಪರಿಹಾರ ಕಲ್ಪಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ.
- ಮುನೀಂದ್ರಕುಮಾರ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ