*ವಾಯುವಿಹಾರಕ್ಕೆ ತೆರಳಿದವರಿಗೆ ದರ್ಶನ
* ಭಯಗೊಂಡು ಕಾಲ್ಕಿತ್ತ ಜನರು
ರಾಮನಗರ
ಜಿಲ್ಲೆಯಲ್ಲಿ ಆನೆಗಳ ಹಾವಳಿ ಸಾಮಾನ್ಯ ಎನ್ನುವಂತೆ ಆಗಿದೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳತ್ತಲೂ ಆನೆಗಳು ದಾಂಗುಡಿ ಇಡುತ್ತಿರುವುದು ನಗರವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.
ಶುಕ್ರವಾರ ಮುಂಜಾನೆ ರಾಮನಗರ ನಗರ ಜನತೆಯ ಪ್ರಮುಖ ವಾಯುವಿಹಾರ ತಾಣವಾದ ರಂಗರಾಯರದೊಡ್ಡಿ ಸಮೀಪವೇ ಎರಡು ಆನೆಗಳು ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯ ತರಿಸಿವೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಆರ್‌ಎಫ್ ಒ ಮನ್ಸೂರ್ ಅಹಮದ್, ಡಿಸಿಎಫ್ ರಾಮಕೃಷ್ಣಪ್ಪ ಅವರ ನೇತೃತ್ವದ ತಂಡ ಆನೆಗಳನ್ನು ಜನವಸತಿ ಪ್ರದೇಶದಿಂದ ದೂರ ಕಳುಹಿಸುವಲ್ಲಿ ಯಶಸ್ವಿಯಾಗಿದೆೆ.
ಬೇರ್ಪಟ್ಟ ಆನೆಗಳು
ರಾಮನಗರ, ಚನ್ನಪಟ್ಟಣ ಭಾಗದಲ್ಲಿ ಅತಿ ಹೆಚ್ಚು ತೊಂದರೆ ಕೊಡುತ್ತಿದ್ದ ಎರಡು ಆನೆಗಳನ್ನು ಇತ್ತೀಚೆಗೆ ಕಾರ್ಯಾಚರಣೆ ನಡೆಸುವ ಮೂಲಕ ಬಂಧಿಸಲಾಗಿತ್ತು. ಇದರಲ್ಲಿ ಒಂದು ಮಖ್ನಾ ಆನೆಯೂ ಸೇರಿದೆ. ಈ ಮಖ್ನಾ ಆನೆಯೊಂದಿಗೆ ಶುಕ್ರವಾರ ಬೆಳಗ್ಗೆ ರಂಗರಾಯರದೊಡ್ಡಿ ಕೆರೆ ಬಳಿ ಕಾಣಿಸಿಕೊಂಡ ಎರಡೂ ಆನೆಗಳು ಇರುತ್ತಿದ್ದವು. ಜತೆಯಾಗಿಯೇ ಎಲ್ಲೆಡೆ ಸಂಚಾರ ಮಾಡುತ್ತಿದ್ದವು ಎಂದು ಹೇಳಲಾಗಿದೆ. ಮಖ್ನಾ ಆನೆಯನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಈ ಎರಡು ಆನೆಗಳು ಆತಂಕಕ್ಕೆ ಒಳಗಾಗಿರುವ ಸಾಧ್ಯತೆ ಇದ್ದು, ಇದರಿಂದಾಗಿ ಚಿಕ್ಕ ಮಣ್ಣುಗುಡ್ಡೆ ಅರಣ್ಯದಿಂದ ಬೆಂಗಳೂರು - ಮೈಸೂರು ಹೆದ್ದಾರಿಯನ್ನು ದಾಟಿ ಪವಿತ್ರವನ, ಅಲ್ಲಿಂದ ಅರ್ಚಕರಹಳ್ಳಿ ಮಾರ್ಗವಾಗಿ ರಂಗರಾಯರದೊಡ್ಡಿಗೆ ಬಂದಿವೆ ಎಂದು ಅಂದಾಜಿಸಲಾಗಿದೆ.
ಆಗಾಗ್ಗೆ ಆಗಮನ
ಶುಕ್ರವಾರ ಕಾಣಿಸಿಕೊಂಡ ಎರಡು ಆನೆಗಳಲ್ಲಿ ಒಂದು ಆನೆ ಆಗಾಗ ರಾಮನಗರ ನಗರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವುದು ಸಾಮಾನ್ಯ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಬಿಳಗುಂಬದ ರಸ್ತೆ ಬಳಿಯ ಡಾ.ರಾಜು ಅವರ ತೋಟದ ಸಮೀಪಕ್ಕೂ ಬಂದಿತ್ತು. ಕಾರ್ಯಾಚರಣೆ ನಡೆಸಿ ಸ್ವಸ್ಥಾನಕ್ಕೆ ಕಳುಹಿಸಲಾಗಿತ್ತು.
ಸ್ವಸ್ಥಾನಕ್ಕಾಗಿ ಡ್ರೈವ್
ರಾಮನಗರ ನಗರ ಪ್ರದೇಶ ಜನರಲ್ಲಿ ಆತಂಕ ಉಂಟು ಮಾಡಿರುವ ಎರಡೂ ಆನೆಗಳನ್ನು ಸ್ವ ಸ್ಥಾನಕ್ಕೆ ಕಳುಹಿಸುವ ಕಾರ್ಯ ಸಂಜೆ 5.30ರ ನಂತರ ಆರಂಭಗೊಂಡಿತು. ಅಲ್ಲಿಯವರೆಗೂ ಅವರ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಸೂರ್ಯ ಮುಳುಗುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿ ಅವುಗಳನ್ನು ಚಿಕ್ಕಮಣ್ಣುಗುಡ್ಡೆ ಅರಣ್ಯಕ್ಕೆ ಕಳುಹಿಸುವ ಕೆಲಸ ಮಾಡಿದರು.
==
ಇತ್ತೀಚೆಗೆ ಸೆರೆಯಾದ ಮಖ್ನಾ ಆನೆಯೊಂದಿಗೆ ಈ ಆನೆಗಳು ಓಡಾಡಿಕೊಂಡಿದ್ದವು. ಆದರೆ, ಮಖ್ನಾ ಸೆರೆಯಿಂದ ಇವು ವಿಚಲಿತವಾಗಿರುವ ಸಾಧ್ಯತೆ ಇದೆ. ಇವುಗಳನ್ನು ಸ್ವಸ್ಥಾನಕ್ಕೆ ಕಳುಹಿಸಲು ಕ್ರಮವಹಿಸಲಾಗಿದೆ.
ಮನ್ಸೂರ್ ಅಹಮದ್,ಆರ್‌ಎಫ್‌ಓ, ರಾಮನಗರ
==
ವಾಕಿಂಗ್ ವೇಳೆ ಆನೆಗಳನ್ನು ಕಂಡು ಭಯವಾಯಿತು. ಒಂದು ವೇಳೆ ಅವುಗಳು ಕೆರೆ ಏರಿ ಮೇಲೆ ಬಂದಿದ್ದರೂ ಸಾಕಷ್ಟು ಮಂದಿಗೆ ಅನಾಹುತವಾಗುತ್ತಿತ್ತು. ಇವುಗಳನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ.
ಶಿವಣ್ಣ, ಪ್ರತ್ಯಕ್ಷದರ್ಶಿ