ಕನಕಪುರ : ಕಳೆದ ಒಂದೂವರೆ ತಿಂಗಳಿಂದ ರೈತರ ಜಮೀನುಗಳಿಗೆ ದಾಳಿಯಿಟ್ಟು ಫಸಲು ನಾಶ ಮಾಡುತ್ತಿದ್ದ ಆನೆಗಳು ಶನಿವಾರ ಮತ್ತೆ ಪ್ರತ್ಯಕ್ಷ್ ಆಗಿದ್ದು, ಟಿ.ಬೇಕುಪ್ಪೆ ಗ್ರಾಮಕ್ಕೆ ನುಗ್ಗಿದ್ದು ಆತಂಕಕ್ಕೊಳಗಾದ ಜನತೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕಸಬಾ ಹೋಬಳಿ ಟಿ. ಬೇಕುಪ್ಪೆ ಹಾಗೂ ನಾರಾಯಣಪುರ ಗ್ರಾಮದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಮೂರು ಆನೆಗಳು ರೈತರ ಜಮೀನುಗಳಿಗೆ ಲಗ್ಗೆಯಿಟ್ಟು ಇಬ್ಬರು ರೈತರನ್ನು ಅಟ್ಟಾಡಿಸಿ ಬೆಳೆಗಳಿಗೆ ಹಾನಿಯುಂಟುಮಾಡಿವೆ. ನಂತರ ಗ್ರಾಮಕ್ಕೆ ನುಗ್ಗಿದ್ದರಿಂದ ಜನತೆ ಭಯಭೀತರಾಗಿದ್ದಾರೆ.
ಗ್ರಾಮದ ಶಿವಲಿಂಗಯ್ಯ ಎಂಬುವವರ ಮಾವು, ಜೋಳ, ಹಲಸು, ಪುನಿತ್ ಎಂಬುವವರ ರಾಗಿ, ಶಿವಕುಮಾರ್ ಎಂಬುವವರ ತೆಂಗಿನ ಮರ ಹಾಗು ರೈತರಾದ ಸುರೇಶ್, ಕುಮಾರ್, ಸಿ. ಮಾದೇಗೌಡ ಅವರ ಜಮೀನಿನನಲ್ಲಿ ಬೆಳೆದಿದ್ದ ಬೆಳೆಗಳಿಗೆ ಹಾನಿಯಾಗಿದೆ. ವಿಷಯ ತಿಳಿದ ಅರಣ್ಯಾಧಿಕಾರಿ ಚಂದ್ರಾನಾಯಕ್ ಸ್ಥಳಕ್ಕೆ ಬರುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮದ ಯುವಕರು, ತಿಂಗಳಲ್ಲಿ 8ರಿಂದ 10 ದಿನ ಆನೆಗಳು ದಾಳಿ ನಡೆಸುತ್ತಿವೆ. ಈಗಲೂ ಸಹ ಗ್ರಾಮದ ಕೊಡುಗೆ ಹೊಲದಲ್ಲಿ ಮೂರು ಕಾಡಾನೆಗಳು ಬೀಡುಬಿಟ್ಟಿವೆ. ಅವುಗಳನ್ನು ಕಾಡಿಗಟ್ಟುವಂತೆ ಒತ್ತಾಯಿಸಿದರು. ಇಷ್ಟುದಿನ ಜಮೀನುಗಳಿಗೆ ನುಗ್ಗುತ್ತಿದ್ದ ಆನೆಗಳು ಇಂದು ಗ್ರಾಮಗಳಿಗೆ ನುಗ್ಗಿವೆ. ಪದೇಪದೆ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆಯವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ನಷ್ಟಕ್ಕೊಳಗಾದ ರೈತರಿಗೆ ಸಿಗಬೇಕಾದ ಪರಿಹಾರ ಕೊಡಿಸುವಂತೆ ಆಗ್ರಹಿಸಿದರು.ಗ್ರಾಮಸ್ಥರಾದ ಸುರೇಶ್, ಚಿಕ್ಕುನ್ನೆಗೌಡ, ಶಿವಲಿಂಗಯ್ಯ, ಪುಟ್ಟಮಾದೇಗೌಡ, ಶಿವಕುಮಾರ್, ನವೀನ್, ಕುಮಾರ್, ವೇಣು ಮುಂತಾದವರು ಇದ್ದರು.