ಜಿಲ್ಲೆ

ಹಾಡಹಗಲೇ ಕಾಡಾನೆಗಳ ಸಂಚಾರ

ಲಲಾಟಾಕ್ಷ ಎಸ್

ಶನಿವಾರಸಂತೆ: ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹಗಲು ವೇಳೆ ಕಾಡಾನೆಗಳು ಸಂಚರಿಸುತ್ತಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.


ಮಂಗಳವಾರ ಮಧ್ಯಾಹ್ನ ಕಾಡಾನೆಯೊಂದು ಕೊಡ್ಲಿಪೇಟೆ ವ್ಯಾಪ್ತಿಯ ಬ್ಯಾಡಗೊಟ್ಟ ಶಾಲೆಯ ಹಿಂಭಾಗ ವಾಸವಾಗಿರುವ ಹಸನಬ್ಬ ಅವರ ಮನೆಗೆ ದಾಳಿ ನಡೆಸಿ ಮನೆಯ ಬಾಗಿಲನ್ನು ಮುರಿದು ಹಾಕಿದೆ. ಈ ವೇಳೆಯಲ್ಲಿ ಮನೆಯೊಳಗಿದ್ದ ಮಾಲೀಕ ಹಸನಬ್ಬ ಗಾಯಗೊಂಡಿದ್ದರು. ನಂತರ ಕಾಡಾನೆ ಪಕ್ಕದ ಅರಣ್ಯದೊಳಗೆ ಓಡಿ ಹೋಗಿದೆ.


ಮಂಗಳವಾರ ಸಂಜೆ ಶನಿವಾರಸಂತೆ-ಕೊಡ್ಲಿಪೇಟೆ ಹೆದ್ದಾರಿಯಲ್ಲಿರುವ ಅವರೆದಾಳು ಬಳಿ ಒಂಟಿ ಸಲಗವೊಂದು ರಸ್ತೆ ಮಧ್ಯೆ ಸಂಚರಿಸಿ ಪಕ್ಕದ ಕಾಫಿ ತೋಟದೊಳಗೆ ನುಸುಳಿತು. ರಸ್ತೆಯುದ್ದಕ್ಕೂ ಸಂಚರಿಸುತ್ತಿದ್ದ ಆನೆಯನ್ನು ನೋಡಿದ ವಾಹನ ಸವಾರರು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.