ಜಿಲ್ಲೆ

ಆನೆ ಕಾರ್ಯಾಚರಣೆ ಮತ್ತೆ ಆರಂಭ

ಗಂಗಾಧರ ಬಿ ವಿ
  • ರೈತರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ
  • ತೆಂಗಿನಕಲ್ಲು ಅರಣ್ಯದಲ್ಲಿವೆ 20ಕ್ಕೂ ಹೆಚ್ಚು ಗಜಪಡೆ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ತೆಂಗಿನಕಲ್ಲು ಅರಣ್ಯದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಬೃಹತ್ ಕಾರ್ಯಾಚರಣೆ ಮೂಲಕ ಸ್ವ-ಸ್ಥಾನದತ್ತ ಅಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿ ರೈತರ ಆಗ್ರಹಕ್ಕೆ ಮಣಿದಿದೆ.

ಕಾವೇರಿ ವನ್ಯಜೀವಿಧಾಮದಿಂದ ತೆಂಗಿನಕಲ್ಲು ಅರಣ್ಯಕ್ಕೆ ಹಿಂಡು ಹಿಂಡು ಆನೆಗಳು ಬಂದಿದ್ದು, 21ಕ್ಕೂ ಹೆಚ್ಚು ಆನೆಗಳು ತೆಂಗಿನಕಲ್ಲು ಅರಣ್ಯ ಸೇರಿವೆ. ನೀರು ಹಸಿರು ಮೇವು ಅರಸಿ ಬಂದಿರುವ ಆನೆಗಳಿಗೆ ತೆಂಗಿನಕಲ್ಲು ಅರಣ್ಯದಲ್ಲಿ ನೀರು ಹಸಿರು ಮೇವು ಸಿಗದೆ ಪ್ರತಿನಿತ್ಯ ಅರಣ್ಯದಿಂದ ಆನೆಗಳ ಹಿಂಡು ಹೊರಬಂದು ಸುತ್ತಮುತ್ತಲ ರೈತರ ತೋಟಗಳಿಗೆ ಲಗ್ಗೆ ಇಟ್ಟು ರೈತರ ಫಸಲು ನಾಶಪಡಿಸಿ ಅಪಾರ ಪ್ರಮಾಣದಲ್ಲಿ ರೈತರ ಬೋರ್‌ವೆಲ್ ಪರಿಕರ ನಾಶ ಮಾಡುತ್ತಾ ರೈತರಿಗೆ ಆನೆಗಳ ಹಿಂಡು ದುಸ್ವಪ್ನವಾಗಿ ಕಾಡುತ್ತಿವೆ.

ಅರಣ್ಯ ಇಲಾಖೆ ಪ್ರತಿದಿನ ರೈತರ ಆಕ್ರೋಶಕ್ಕೆ ತುತ್ತಾಗುತ್ತಿದೆ. ಆನೆಗಳನ್ನು ಸ್ವ-ಸ್ಥಾನಕ್ಕೆ ಅಟ್ಟಬೇಕು, ತೆಂಗಿನಕಲ್ಲು ಅರಣ್ಯಕ್ಕೆ ಆನೆಗಳು ಬರದಂತೆ ತಡೆದು ಈ ಭಾಗದಲ್ಲಿ ರೈತರ ಕೃಷಿ ಉಳಿಸಬೇಕೆಂಬ ಕೂಗು ರೈತರಿಂದ ಕೇಳಿ ಬರುತ್ತಲೇ ಇತ್ತು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮತ್ತು ಅಧಿಕಾರಿಗಳು ರೈತರ ಒತ್ತಾಯಕ್ಕೆ ಮಣಿದು ಆನೆ ದಾಳಿಯಿಂದ ಆಗಿರುವ ನಷ್ಟವನ್ನು ಕಣ್ಣಾರೆ ಕಂಡು ಬಂದಿದ್ದರು. ಈ ವೇಳೆ ರೈತರು ತಮ್ಮ ಸಮಸ್ಯೆ ಹೇಳಿಕೊಂಡು ಆನೆಗಳನ್ನು ಕಾರ್ಯಾಚರಿಸುವಂತೆ ಆಗ್ರಹಿಸಿದ್ದರು.

ರೈತರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಸುಮಾರು 50ಕ್ಕೂ ಹೆಚ್ಚಿನ ಆನೆ ಕಾರ್ಯಪಡೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನೇತೃತ್ವದಲ್ಲಿ ಗುರುವಾರದಿಂದ ಕಾರ್ಯಾಚರಣೆಗೆ ಇಳಿದಿದೆ. ತೆಂಗಿನಕಲ್ಲು ಅರಣ್ಯ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಷ್ಟು ವಿಸ್ತಾರ ಹೊಂದಿದೆ. ಆನೆಗಳು ತಂಡ ತಂಡವಾಗಿ ಒಂದೊಂದು ಕಡೆ ಮುಖ ಮಾಡಿದ್ದು ಅರಣ್ಯ ಇಲಾಖೆಗೆ ಮತ್ತಷ್ಟು ಬಿಸಿ ತಂದಿವೆ.

ತೆಂಗಿನಕಲ್ಲು ನೆಲಮಲೆ ಭಾಗ, ಅರಳಾಳುಸಂದ್ರ ಭಾಗ, ದೊಡ್ಡನಹಳ್ಳಿ ಭಾಗ, ಮೆಣಸಿಗನಹಳ್ಳಿ ಭಾಗ, ಚಿಕ್ಕಮಣ್ಣುಗುಡ್ಡೆ ಅರಣ್ಯದಲ್ಲಿ ಒಂದು, ಎರಡೂ, ಮೂರು, ಐದು, ಒಂಟಿ ಆನೆಗಳಂತೆ ವಿಂಗಡಣೆಯಾಗಿವೆ. ಆನೆಗಳ ಹಿಂಡನ್ನು ಒಟ್ಟಿಗೆ ಸೇರಿಸಿ ತೆಂಗಿನಕಲ್ಲು ಅರಣ್ಯದಿಂದ ಕಾರ್ಯಾಚರಿಸುವ ಕೆಲಸಕ್ಕೆ ಕೈ ಹಾಕಿದೆ. ಕಳೆದ ವರ್ಷವೂ 28ಕ್ಕೂ ಹೆಚ್ಚಿದ್ದ ಆನೆಗಳನ್ನು ಇದೇ ರೀತಿಯಾಗಿ ಬೃಹತ್ ಕಾರ್ಯಾಚರಣೆ ಮೂಲಕ ಸುಮಾರು 20ಕ್ಕೂ ಹೆಚ್ಚಿನ ಆನೆಗಳನ್ನು ಸ್ವ-ಸ್ಥಾನಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು.

ಅದೇ ರೀತಿಯಲ್ಲಿ ಯಶಸ್ವಿ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ಕಾರ್ಯಾಚರಣೆಯಲ್ಲಿ ಹೋದರೂ ಮತ್ತೆ ಪದೇಪದೆ ತೆಂಗಿನಕಲ್ಲು ಅರಣ್ಯ ಸೇರುತ್ತಿರುವ ಆನೆಗಳು ಈ ಸಲವಾದರೂ ಸ್ವಸ್ಥಾನದತ್ತ ಮುಖ ಮಾಡುತ್ತವೆಯೇ ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಬೋರ್‌ವೆಲ್ ನಾಶ

ಬರ ಹಿನ್ನೆಲೆಯಲ್ಲಿ ಕೆರೆ ಕುಂಟೆಗಳಲ್ಲಿ ನೀರು ಖಾಲಿಯಾಗಿ ಆನೆಗಳು ನೀರಿಗಾಗಿ ರೈತರ ಪಂಪ್‌ಹೌಸ್‌ನತ್ತ ಧಾವಿಸಿ ನೀರು ಸಿಗದೆ ಬೋರ್‌ವೆಲ್ ಪರಿಕರ ನಾಶ ಮಾಡುತ್ತಿವೆ. ಇದರಿಂದ ರೈತರು ಲಕ್ಷಾಂತರ ರೂ. ಆರ್ಥಿಕ ನಷ್ಟ ಕಾಣುತ್ತಿದ್ದಾರೆ. ಪದೇಪದೆ ಬೋರ್‌ವೆಲ್ ರಿಪೇರಿ ಮಾಡಿಸಿ ಸುಸ್ತಾಗಿರುವ ರೈತರು ಕೃಷಿ ಚಟುವಟಿಕೆಗೆ ನೀರಿಲ್ಲದೆ ಜಾನುವಾರು ಮೇವು, ರೇಷ್ಮೆ ಕಡ್ಡಿ ಬೆಳೆಗೆ ತೊಡಕಾಗಿದೆ.

ಅರಣ್ಯದ ಕೆರೆಗಳಿಗೆ ನೀರು ತುಂಬಿಸಿ

ಅರಣ್ಯದಲ್ಲಿ ನೀರಿಲ್ಲದೆ ಆನೆ ಸೇರಿ ಇತರ ಒಂದಷ್ಟು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ. ಆದರೆ, ಸಣ್ಣ ಸಣ್ಣ ಪಕ್ಷಿಗಳು, ಚಿಕ್ಕ ಚಿಕ್ಕ ಪ್ರಾಣಿಗಳು ನೀರಿನ ದಾಹ ತಣಿಸಿಕೊಳ್ಳದೆ ಪ್ರಾಣ ಕಳೆದುಕೊಳ್ಳುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಕಾಡಿನ ಒಳ ಭಾಗದಲ್ಲಿ ನೀರಿನ ವ್ಯವಸ್ಥೆಗೆ ತಾತ್ಕಾಲಿಕ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಕಾಡನಕುಪ್ಪೆ ರಾಘವೇಂದ್ರ.

ತೆಂಗಿನಕಲ್ಲು ಅರಣ್ಯದಲ್ಲಿ ಬಂದು ಸೇರಿರುವ ಆನೆಗಳ ಹಿಂಡು ಅರಣ್ಯದ ವಿವಿಧ ಕಡೆ ವಿಂಗಡಣೆಯಾಗಿದ್ದು, ಅಂತಹ ಆನೆಗಳ ಹಿಂಡನ್ನು ಒಟ್ಟಿಗೆ ಸೇರಿಸಿ ಬೃಹತ್ ಕಾರ್ಯಾಚರಣೆ ಮೂಲಕ ಸ್ವ-ಸ್ಥಾನದತ್ತ ಆನೆಗಳನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಬೇಸಿಗೆ ಬಿಸಿಲು ಒಂದಷ್ಟು ಕಾರ್ಯಾಚರಣೆಗೆ ಅಡ್ಡಿ ಆಗಿದ್ದು, ರಾತ್ರಿ ವೇಳೆ ಹೆಚ್ಚಿನ ಕಾರ್ಯಾಚರಣೆ ನಡೆಸಿ ಸ್ವಸ್ಥಾನ ಸೇರಿಸಲಾಗುತ್ತದೆ.
ರಾಮಕೃಷ್ಣಪ್ಪ, ಡಿಎಫ್‌ಒ, ರಾಮನಗರ



ತೆಂಗಿನಕಲ್ಲು ಅರಣ್ಯದ ಸುತ್ತಾ ಮುತ್ತ ಹಸಿರು ಮೇವು ರುಚಿ ಕಂಡಿರುವ ಆನೆಗಳ ಹಿಂಡು ಕಾರ್ಯಾಚರಣೆ ನಡೆಸಿದರೂ ಮತ್ತೆ ಮತ್ತೆ ವಾಪಸ್ ಬರುತ್ತಿವೆ. ಜತೆಗೆ ಮತ್ತಷ್ಟು ಆನೆಗಳನ್ನು ಜತೆಯಲ್ಲಿ ಕರೆತರುವ ಕಾರಣ ಆನೆಗಳ ಸಮಸ್ಯೆ ದಿನೇದಿನೆ ಹೆಚ್ಚುತ್ತಿದೆ. ಅರಣ್ಯ ಇಲಾಖೆ ಸ್ವ-ಸ್ಥಾನದಿಂದ ಆನೆಗಳು ಬರದಂತೆ ತಡೆದರೆ ಮಾತ್ರ ತೆಂಗಿನಕಲ್ಲು ಭಾಗಕ್ಕೆ ಆನೆಗಳು ಬರುವುದನ್ನು ತಡೆಗಟ್ಟಬಹುದು. ಇಲ್ಲದಿದ್ದರೆ ಮುಂದೆ ಆನೆಗಳ ಸಂಖ್ಯೆ ಹೆಚ್ಚಾಗಿ ಈ ಭಾಗದ ರೈತರನ್ನು ದೇವರೇ ಕಾಪಾಡಬೇಕು.
ನರೇಂದ್ರ, ಬನ್ನಿಕುಪ್ಪೆ