ಜಿಲ್ಲೆ

ವಾಹನಗಳ ಸಂಚಾರಕ್ಕೆ ಕಾಡಾನೆ ಅಡಚಣೆ-ಕಾಡಿಗೆ ಅಟ್ಟಿದ ಅರಣ್ಯ ಸಿಬ್ಬಂದಿ

ಎ. ಆರ್. ರಘುರಾಮ

ಗುಂಡ್ಲುಪೇಟೆ : ಬಂಡೀಪುರ ಊಟಿ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಲಾಗಿ ನಿಂತ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮೂಲಕ ಕಾಡಿಗೆ ಅಟ್ಟುವಲ್ಲಿ ಹರಸಾಹಸ ಮಾಡಿದರು. ಕಳೆದ 15 ದಿನಗಳಿಂದ ಕಾಡಾನೆಯೊಂದು ತರಕಾರಿ ತಿನ್ನುವ ಆಸೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ಅಡ್ಡಗಟ್ಟುತ್ತಿದೆ. ಬೆಳ್ಳಂಬೆಳಗ್ಗೆ ರಸ್ತೆಗಿಳಿಯುವ ಈ ಆನೆ ತರಕಾರಿ ಸಾಗಣೆ ವಾಹನಗಳಿಂದ ಆಹಾರ ಎಳೆದು ತಿಂದು ರುಚಿ ಕಂಡಿದೆ.

ಭಾನುವಾರವೂ ಬಂಡೀಪುರ -ಊಟಿ ರಸ್ತೆಯ ಕೆರೆಯಬಳಿ ಮೇಯುತ್ತಿದ್ದ ಆನೆ ರಸ್ತೆಗೆ ಬಂದು ತರಕಾರಿ ಸಾಗಣೆ ಟೆಂಪೋ ಸೇರಿದಂತೆ ದೊಡ್ಡ ಲಾರಿಗಳನ್ನು ಅಡ್ಡಗಟ್ಟಿ, ಮುಚ್ಚಿರುವ ಟಾರ್ಪಾಲಿನ್ ಎಳೆದುಹಾಕಿ ದಾಂಧಲೆ ನಡೆಸುತ್ತಿತ್ತು. ಆ ಕಾರಣಕ್ಕಾಗಿ ಸಿಕ್ಕ ಸಿಕ್ಕ ಲಾರಿಗಳನ್ನು ಅಡ್ಡಗಟ್ಟುವಲ್ಲಿ ಮುಂದಾಗಿದೆ. ಮುಂಜಾನೆ ಮಂಜುಮುಸುಕಿದ ವಾತಾವರಣದಲ್ಲಿ ರಸ್ತೆಯಲ್ಲಿ ಆನೆ ನಿಂತಿರುವುದು ಬಹು ದೂರದಿಂದ ಕಾಣುವುದಿಲ್ಲ. ವಾಹನ ಹತ್ತಿರ ಬರುತ್ತಿದ್ದಂತೆ ಕಾಣಿಸಿಕೊಳ್ಳುವ ಆನೆ ಕಂಡು ಗಲಿಬಿಲಿಗೊಳಗಾಗುವ ವಾಹನ ಸವಾರರು, ಪಾರಾಗಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿತ್ತು.

ವಿಷಯ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಪಟಾಕಿ ಸಿಡಿಸಿ ಆನೆ ಕಾಡಿಗಟ್ಟಲು ಮುಂದಾದ ಸಂದರ್ಭ ಅವರ ಮೇಲೇ ದಾಳಿಗೆ ಮುಂದಾಗಿತ್ತು. ಸಂಜೆ ವರೆಗೂ ಕಾರ್ಯಾಚರಣೆ ನಡೆಸಿ ಕಡೆಗೂ ಆನೆ ಕಾಡಿಗಟ್ಟಲಾಯಿತು. ನಂತರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಹೆದ್ದಾರಿ ಗಸ್ತು ಪಡೆ ಸೇರಿದಂತೆ ಇಡೀ ಬಂಡೀಪುರದ ಅರಣ್ಯ ಸಿಬ್ಬಂದಿ ಆನೆಯನ್ನು ಕಾಡಿಗಟ್ಟಲು ಶ್ರಮಿಸಿದೆ.