ಜಿಲ್ಲೆ

ಮೈಸೂರಿನಲ್ಲಿ ಆನೆ ಹಲ್ಲು ಸಂಗ್ರಹ; ಆರೋಪಿ ಬಂಧನ

ಸದೇಶ್ ಕಾರ್ಮಾಡ್

ಮೈಸೂರು: ರಾಜ್ಯದಲ್ಲಿ ಹುಲಿ ಉಗುರು ಕಾರ್ಯಾಚರಣೆ ಬಿರುಸುಗೊಂಡಿರುವ ಹೊತ್ತಿನಲ್ಲಿಯೇ ಅರಣ್ಯ ಇಲಾಖೆ ಅಧಿಕಾರಿಗಳು ನಗರದಲ್ಲಿ ಒಂದು ಜೊತೆ ಆನೆಯ ಹಲ್ಲನ್ನು ಹೊಂದಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಉದಯಗಿರಿ ನಿವಾಸಿ ಅಭಿರಾಮ ಸುಂದರಂ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡ ಬುಧವಾರ ಅಭಿರಾಮ ಸುಂದರಂ ಮನೆ ಮೇಲೆ ದಾಳಿ ನಡೆಸಿ ಆನೆಯ ಹಲ್ಲುಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆನೆಯ ಹಲ್ಲುಗಳು ಆರೋಪಿಗೆ ಎಲ್ಲಿ ದೊರೆಯಿತು? ಯಾವ ಕಾರಣಕ್ಕೆ ಮನೆಯಲ್ಲಿ ಅಕ್ರಮವಾಗಿ ಇರಿಸಿಕೊಳ್ಳಲಾಗಿದೆ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ಡಿಸಿಎಫ್ ಡಾ. ಬಸವರಾಜ್, ಎಸಿಎಫ್ ಲಕ್ಷ್ಮೀಕಾಂತ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಸುರೇಂದ್ರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.