ಜಿಲ್ಲೆ

ಸೊಂಡಿಲಿಗೆ ಪೆಟ್ಟಾಗಿ ಆನೆ ಸಂಕಷ್ಟ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ-ಪಾಲಾರ್ ಮಾರ್ಗದಲ್ಲಿನ ಇಂಡಿಬಸಪ್ಪನ ದೇಗುಲದ ಬಳಿಯ ತೊಟ್ಟಿಯಲ್ಲಿ ಸೊಂಡಿಲಿಗೆ ಪೆಟ್ಟಾಗಿರುವ ಆನೆಯೊಂದು ನೀರು ಕುಡಿಯಲು ಪರಿತಪಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೇಗುಲ ಸಮೀಪದ ತೊಟ್ಟಿಯ ಬಳಿ ಅರಣ್ಯ ಪ್ರದೇಶದಿಂದ ಆಗಮಿಸಿದ ಆನೆ ನಿಧಾನ ಗತಿಯಲ್ಲಿ ನೀರು ಕುಡಿಯುತ್ತಿದ್ದು, ಪರಿತಪಿಸುತ್ತಿತ್ತು. ಇದನ್ನು ಸ್ಥಳೀಯರು ಸೂಕ್ಷ್ಮವಾಗಿ ವೀಕ್ಷಿಸಿದಾಗ ಸೊಂಡಿಲಿಗೆ ಪೆಟ್ಟಾಗಿ ಸರಿಯಾಗಿ ನೀರು ಕುಡಿಯದಿರುವುದು ಗಮನಕ್ಕೆ ಬಂತು.

ಹರಸಾಹಸದಿಂದ ನೀರು ಕುಡಿಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಆನೆಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಒತ್ತಾಯಿದ್ದಾರೆ.