Oplus_131072 
ಜಿಲ್ಲೆ

ಹೆಚ್ಚುತ್ತಿದೆ ಆನೆ-ಮಾನವ ಸಂಘರ್ಷ

ನಾಗೇಶ ಎಸ್

ಸಿದ್ದಾಪುರ: ಕಾಡು ನಾಶವಾಗುತ್ತಿರುವ ಪರಿಣಾಮ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದು, ಮಾನವನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವಂತೆ ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದು ಜನರ ಮೇಲೆ ದಾಳಿ ಮಾಡಲಾರಂಭಿಸಿವೆ.

ಜಿಲ್ಲೆಯ ಹಲವೆಡೆ ಆಗಾಗ್ಗೆ ಕಾಡು ಪ್ರಾಣಿಗಳು ನಾಡಿನಲ್ಲಿ ಕಾಣಿಸಿಕೊಂಡು ದಾಳಿ ನಡೆಸಿ ಭಯ ಹುಟ್ಟಿಸುತ್ತಿವೆ. ಶುಕ್ರವಾರ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಕೊಡಗಿನ ಸಿದ್ದಾಪುರ ಸಮೀಪದ ಚನ್ನಯ್ಯನಕೋಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯ ಸಮೀಪವೇ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದೆ. ಚನ್ನಯ್ಯನಕೋಟೆ ನಿವಾಸಿ ಕಾತಾಯಿ (75) ಮೃತ ದುರ್ದೈವಿ. ಮಗನ ಮನೆಯಿಂದ ಬರುತ್ತಿದ್ದ ಸಂದರ್ಭ ದಿಢೀರ್ ಪ್ರತ್ಯಕ್ಷಗೊಂಡ ಕಾಡಾನೆ, ದಾಳಿ ಮಾಡಿ ವೃದ್ಧೆಯನ್ನು ಸಾಯಿಸಿದೆ.

ಹಿರಿಯ ಮಗ ನಾಗರಾಜನ ಮನೆಯಿಂದ ಕಿರಿಯ ಮಗ ಶ್ರೀನಿವಾಸನ ಮನೆಗೆ ಬೆಳಗ್ಗೆ 6.30ರ ಸುಮಾರಿಗೆ ಬರುತ್ತಿದ್ದ ವೇಳೆ ಯಮನಂತೆ ಕಾಣಿಸಿಕೊಂಡ ಕಾಡಾನೆ ವೃದ್ಧೆ ಮೇಲೆ ದಾಳಿ ಮಾಡಿ ಕಾಲಿನಿಂದ ತುಳಿದು ಸೊಂಡಲಿನಿಂದ ಎತ್ತಿ ಬಿಸಾಡಿದೆ. ರಕ್ತದ ಮಡುವಿನಲ್ಲಿದ್ದ ವೃದ್ಧೆ ಸ್ಥಳದಲ್ಲಿ ಉಸಿರು ಚೆಲ್ಲಿದ್ದಾರೆ. ಮಾನವ-ಕಾಡುಪ್ರಾಣಿಗಳು ಸಂಘರ್ಷ ತಡೆಯುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿರಾಜಪೇಟೆಯ ಶಾಸಕ ಎ.ಎಸ್.ಪೊನ್ನಣ್ಣ ಅವರು, ಹಿರಿಯ ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಘಟನೆಯ ಬಗ್ಗೆ ವಿವರ ಪಡೆದುಕೊಂಡು ತುರ್ತು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಘಟನಾ ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳುವುದರೊಂದಿಗೆ ಮೃತರ ಕುಟುಂಬಕ್ಕೆ ತಕ್ಷಣ ತುರ್ತು ಪರಿಹಾರ ನೀಡಬೇಕೆಂದು ಸೂಚನೆ ನೀಡಿದರು.