ಹನೂರು: ತಾಲೂಕಿನ ಮಲೆಮಹದೇಶ್ವರಬೆಟ್ಟ-ಪಾಲಾರ್ ಮಾರ್ಗದಲ್ಲಿ ಬುಧವಾರ ರಾತ್ರಿ ಒಂಟಿ ಸಲಗವೊಂದು ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ವಾಹನ ಸವಾರರಲ್ಲಿ ಕೆಲಕಾಲ ಆತಂಕ ಉಂಟಾಯಿತು.
ಈ ಭಾಗದಲ್ಲಿ ರಾತ್ರಿ ಸುಮಾರು 9.30ರಲ್ಲಿ ತುಂತುರು ಮಳೆಯಾಗುತ್ತಿದ್ದು, ವಾಹನಗಳ ಸಂಚಾರವಿತ್ತು. ಆದರೆ, ಕಳೆದ ಹಲವು ತಿಂಗಳಿಂದ ಸಾರ್ವಜನಿಕರ ಕಣ್ಣಿಗೆ ಕಾಣಿಸಿಕೊಳ್ಳದ ಒಂಟಿ ಸಲಗ ದಿಢೀರ್ ಪ್ರತ್ಯಕ್ಷವಾಗಿ ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಈ ವೇಳೆ ಸಂಚರಿಸುತ್ತಿದ್ದ ವಾಹನ ಸವಾರರು ಕೆಲಕಾಲ ರಸ್ತೆಯಲ್ಲೇ ನಿಲ್ಲುವಂತಾಯಿತು. ಸಲಗ ಅರಣ್ಯ ಪ್ರದೇಶದತ್ತ ತೆರಳಿದ ಬಳಿಕ ವಾಹನ ಸವಾರರು ನಿಟ್ಟುಸಿರು ಬಿಟ್ಟು ಸಂಚರಿಸಿದರು. ಇದರ ವಿಡಿಯೋವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.