ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಆನೆಕಾಲು ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ಅರ್ಲಟ್ ಆಗಿರುವ ಆರೋಗ್ಯ ಇಲಾಖೆ ಸಾಮೂಹಿಕವಾಗಿ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ.
ಉತ್ತರ ಭಾರತದದಿಂದ ಉದ್ಯೋಗ ಅರಸಿ ತಾಲೂಕಿಗೆ ಸಾಕಷ್ಟು ಜನರು ವಲಸೆ ಬಂದಿದ್ದು, ಅವರಲ್ಲಿ ಆನೆಕಾಲು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಸಬಾ ಹೋಬಳಿಯ ಆಲದಕಟ್ಟೆ ತಾಂಡ್ಯ ಹಾಗೂ ಹುಳಿಯಾರು ಹೋಬಳಿಯ ಸೋಮನಹಳ್ಳಿ ಭಾಗದಲ್ಲಿ ಮೇಲಧಿಕಾರಿಗಳ ಆದೇಶದಂತೆ ಗ್ರಾಮಸ್ಥರನ್ನು ಸಾಮೂಹಿಕವಾಗಿ ರಕ್ತ ಪರೀಕ್ಷೆಗೆ ಒಳಪಡಿಸಲಾಗಿದೆ.
ಆಲದಕಟ್ಟೆ ಬಳಿ ರಸ್ತೆ ಕಾಮಗಾರಿಗೆ ಕೂಲಿ ಆಧಾರದಲ್ಲಿ ಬಂದಿರುವ ಹೊರ ರಾಜ್ಯದವರಲ್ಲಿ ಒಬ್ಬರಿಗೆ ಆನೆಕಾಲು ರೋಗ ಕಾಣಿಸಿಕೊಂಡಿರುವ ಬಗ್ಗೆ ವರದಿ ಬಂದ ಹಿನ್ನೆಲೆಯಲ್ಲಿ ಬುಧವಾರ ಹಾಗೂ ಗುರುವಾರ ಗ್ರಾಮಗಳಲ್ಲಿ ಆರೋಗ್ಯಾಧಿಕಾರಿಗಳು ಮೊಕ್ಕಾಂ ಹೂಡಿ ಪ್ರತಿಯೊಬ್ಬರ ರಕ್ತ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.
ಸೋಮನಹಳ್ಳಿಯಲ್ಲಿಯೂ ಒಬ್ಬರಿಗೆ ಈ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಎರಡು ಗ್ರಾಮಗಳಲ್ಲಿ ಪರೀೆ ಕಾರ್ಯ ನಡೆಯುತ್ತಿದೆ. ಇದುವರೆಗೆ 200 ಜನರನ್ನು ರಕ್ತ ಪರೀೆಗೆ ಒಳಪಡಿಸಿದ್ದು ಈ ಕೆಲಸ ಮುಂದುವರಿದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
"ಉತ್ತರ ಭಾರತದ ಜನರಲ್ಲಿ ಹೆಚ್ಚು ಕಂಡುಬರುವ ಆನೆಕಾಲು ರೋಗವು ಸೊಳ್ಳೆಗಳಿಂದ ಹರಡುತ್ತದೆ. ಆಲದಕಟ್ಟೆ ತಾಂಡ್ಯ ಹಾಗೂ ಹುಳಿಯಾರು ಹೋಬಳಿಯ ಸೋಮನಹಳ್ಳಿ ಭಾಗದಲ್ಲಿ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರದ ಅದೇಶದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ರಕ್ತ ಪರೀಕ್ಷಾ ಕಾರ್ಯ ನಡೆಸಲಾಗುತ್ತಿದೆ."
- ಡಾ.ಯಶ್ವಂತ್ ತಾಲೂಕು ವೈದ್ಯಾಧಿಕಾರಿ