ಜಿಲ್ಲೆ

ಆನೆಗಳ ಸಾವಿನ ಪ್ರಮಾಣ ಹೆಚ್ಚಳ

ಸುನಿಲ್ ಪೊನ್ನೇಟಿ

ಮಡಿಕೇರಿ:

ದೇಶದಲ್ಲಿ ಅತ್ಯಧಿಕ ಆನೆಗಳನ್ನು ಹೊಂದಿರುವ ಹೆಗ್ಗಳಿಕೆಯ ಕರ್ನಾಟಕದಲ್ಲಿ ಆನೆಗಳ ಸಾವಿನ ಸಂಖ್ಯೆಯೂ ಅಧಿಕವಾಗಿದೆ. ೨೦೨೧ರಿಂದ ಈ ವರ್ಷದ ಜೂ, ೪ರ ತನಕ ವಿವಿಧ ಕಾರಣಗಳಿಂದ ೧೭೬ ಆನೆಗಳು ಸಾವನ್ನಪ್ಪಿವೆ. ಈ ಪೈಕಿ ವಿದ್ಯುತ್ ಅಪಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಆನೆಗಳ ಸಂಖ್ಯೆ ೨೫. ರಸ್ತೆ ಅಪಘಾತ, ರೈಲು ಡಿಕ್ಕಿ ಹಾಗೂ ಗುಂಡೇಟಿನಿಂದ ಕಾಡಾನೆಗಳು ಜೀವತೆತ್ತ ಪ್ರಕರಣಗಳೂ ದಾಖಲಾಗಿದೆ.

ವರ್ಷದಿಂದ ವರ್ಷಕ್ಕೆ ಆನೆ - ಮಾನವ ಸಂಘರ್ಷ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದರಿಂದಾಗಿ ಆಗಾಗ್ಗೆ ಮಾನವ ಪ್ರಾಣ ಹಾನಿ, ಅಂಗವೈಕಲ್ಯ ಹಾಗೂ ಆಸ್ತಿ ನಷ್ಟ ಪ್ರಕರಣಗಳು ವರದಿ ಆಗುತ್ತಲೇ ಇರುತ್ತದೆ. ಈ ಸಂಘರ್ಷದಲ್ಲಿ ಭೂಮಿ ಮೇಲಿನ ಅತ್ಯಂತ ದೊಡ್ಡ ಪ್ರಾಣಿ ಎಂದು ಗುರುತಿಸಲಾಗುವ ಆನೆಗಳೂ ಜೀವ ಕಳೆದುಕೊಳ್ಳುವುದು ಎಲ್ಲಿ ಕೂಡ ಅಷ್ಟಾಗಿ ಸದ್ದು ಮಾಡುವುದಿಲ್ಲ. ಗಾತ್ರದಲ್ಲಿ ದೊಡ್ಡದಾದರೂ ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಸೂಕ್ಷ್ಮ ಅನ್ನಿಸಿಕೊಂಡಿರುವ ಆನೆಗಳ ಸಾವು ಪ್ರಕೃತಿಗೆ ತುಂಬಲಾರದ ನಷ್ಟ ಉಂಟು ಮಾಡುತ್ತದೆ.

ಆನೆಗಳಲ್ಲಿ ಆಫ್ರಿಕನ್ ಮತ್ತು ಏಷ್ಯನ್ ಆನೆಗಳು ಎನ್ನುವ ಎರಡು ಬಗೆಗಳಿದ್ದು, ಭಾರತದಲ್ಲಿ ಏಷ್ಯಾ ಆನೆಗಳು ಕಂಡುಬರುತ್ತದೆ. ಈ ಎರಡೂ ಖಂಡಗಳಲ್ಲಿ ಸಾಮಾನ್ಯವಾಗಿದ್ದ ಆನೆಗಳ ಜನಸಂಖ್ಯೆ ಕಳೆದ ಶತಮಾನದಲ್ಲಿ ಗಮನಾರ್ಹ ಕುಸಿತ ಕಂಡಿದೆ. ಅಕ್ರಮ ದಂತ ವ್ಯಾಪಾರಕ್ಕಾಗಿ ಬೇಟೆ ಆಫ್ರಿಕನ್ ಆನೆಗಳಿಗೆ ಕಂಟಕವಾದರೆ, ದಂತಕ್ಕಾಗಿ ಬೇಟೆ ಜತೆಗೆ ಅರಣ್ಯ ನಾಶ ಮತ್ತು ಮಾನವ-ಆನೆ ಸಂಘ?ರ್ ಏಷ್ಯನ್ ಆನೆಗಳ ಸಂಖ್ಯೆ ಕಡಿಮೆ ಆಗಲು ಕಾರಣವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಕಠಿಣ ಕಾನೂನು, ಸಂರಕ್ಷಣಾ ಕ್ರಮಗಳು, ಜಾಗೃತಿ ಕಾರ್ಯಕ್ರಮಗಳ ಮೂಲಕ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣಲಾರಂಭಿಸಿದೆ. ೨೦೧೭ರ ಆನೆಗಳ ಗಣತಿ ಪ್ರಕಾರ ಭಾರತದಲ್ಲಿ ೨೭,೩೧೨ ಆನೆಗಳು ಇರುವುದಾಗಿ ಲೆಕ್ಕಹಾಕಲಾಗಿದೆ. ದೇಶಲ್ಲೇ ಹೆಚ್ಚಿನ ಆನೆಗಳು ಕರ್ನಾಟಕದಲ್ಲಿದ್ದು, ಇಲ್ಲಿ ೬,೦೪೯ ಆನೆಗಳನ್ನು ಲೆಕ್ಕಹಾಕಲಾಗಿದೆ. ರಾಜ್ಯದಲ್ಲಿ ಕೊಡಗು ಸೇರಿದಂತೆ ರಾಜ್ಯದ ಮಲೆನಾಡು ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಆನೆಗಳು ನೆಲೆಯಾಗಿವೆ.

ಆನೆ - ಮಾನವ ಸಂಘರ್ಷ ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಾಡಾನೆಗಳ ಅಸಹಜ ಸಾವಿನ ಪ್ರಮಾಣವೂ ಕಳವಳಕಾರಿಯಾಗಿದೆ. ವಿವಿಧ ಕಾರಣಗಳಿಂದ ಆನೆಗಳು ಮೃತಪಡುತ್ತಿವೆ. ಆನೆ ಕಾರಿಡಾರ್‌ನಲ್ಲಿ ಮಾನವ ಹಸ್ತಕ್ಷೇಪ ನಿರಂತರವಾಗಿ ನಡೆಯುತ್ತಿರುವುದರಿಂದ ಅಸ್ವಾಭಾವಿಕವಾಗಿ ಮೃತಪಡುವ ಆನೆಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಡಿನ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿಗಳೂ ಆನೆಗಳ ಪಾಲಿಗೆ ಯಮಪಾಶವಾಗಿ ರೂಪಗೊಂಡಿದೆ. ಕೆಲವೆಡೆ ಸರಿಯಾದ ನಿರ್ವಹಣೆ ಇಲ್ಲದೆ ಜೋತಾಡುವ ತಂತಿಗಳು ತಗುಲಿ ಮೃತಪಟ್ಟಿದ್ದರೆ, ಬಿದ್ದ ಮರಗಳಿಂದ ವಿದ್ಯುತ್ ತಂತಿಗಳು ತುಂಡಾಗಿ ನೆಲದ ಮೇಲೆ ಹರಡಿ, ಅದು ತಗುಲಿಯೂ ಆನೆಗಳು ಸಾವನ್ನಪಿದ ಘಟನೆಗಳು ನಡೆದಿದೆ. ಇನ್ನು ಕೆಲವೆಡೆ, ಹೊಲ ಅಥವಾ ತೋಟಗಳಿಗೆ ಎಳೆದ ತಂತಿಗಳಿಗೆ ಅಕ್ರಮವಾಗಿ ಹರಿಸಿದ ವಿದ್ಯುತ್ ತಗುಲಿಯೂ ಆನೆಗಳು ದುರ್ಮಣಕ್ಕೀಡಾಗಿವೆ.

ಕಾಡಿನ ಮಧ್ಯೆ ಹಾದುಹೋಗಿರುವ ಹೆದ್ದಾರಿ, ರೈಲ್ವೆ ಹಳಿಗಳೂ ಆನೆಗಳಿಗೆ ಮರಣ ಶಾಸನ ಬರೆದಿರುವುದು ದಾಖಲಾಗಿದೆ. ೨೦೨೧ರಲ್ಲಿ ಮೃತಪಟ್ಟ ೮೩ ಆನೆಗಳ ಪೈಕಿ ೧೨ ಆನೆಗಳು ವಿದ್ಯುತ್ ಸ್ಪರ್ಶ, ೨ ಗುಂಡೇಟು, ೧ ರೈಲು ಡಿಕ್ಕಿ, ೩ ಇತರ ಅಸ್ವಾಭಾವಿಕ ಕಾರಣಗಳಿಂದ ಸಾವನ್ನಪ್ಪಿದರೆ, ಉಳಿದವು ಸ್ವಾಭಾವಿಕವಾಗಿ ಮೃತಪಟ್ಟಿವೆ.

೨೦೨೨ರಲ್ಲಿ ೭೨ ಆನೆಗಳು ಮೃತಪಟ್ಟಿದ್ದು, ಇದರಲ್ಲಿ ೧೨ ಆನೆಗಳ ಸಾವಿಗೆ ವಿದ್ಯುತ್ ಅಪಘಾತಗಳು ಕಾರಣವಾಗಿದೆ. ೨ ಆನೆಗಳು ಅಪಘಾತ, ೨ ಆನೆಗಳು ಗುಂಡೇಟು ಹಾಗೂ ೩ ಆನೆಗಳು ಇತರ ಅಸ್ವಾಭಾವಿಕ ಕಾರಣಗಳಿಂದ ಮೃತಪಟ್ಟಿದ್ದು, ಉಳಿದವು ಸ್ವಾಭಾವಿಕವಾಗಿ ಸಾವನ್ನಪ್ಪಿವೆ.
ಈ ವರ್ಷ ಜೂ. ೪ರ ತನಕ ೨೧ ಆನೆಗಳು ಸಾವನ್ನಪ್ಪಿದ್ದು, ಇದರಲ್ಲಿ ೪ ಆನೆಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿವೆ. ಉಳಿದವು ಸ್ವಾಭಾವಿಕವಾಗಿ ಮರಣಹೊಂದಿವೆ.

ಈ ಪ್ರಮಾಣದಲ್ಲಿ ಆನೆಗಳ ಸಾವು ಕಳವಳಕಾರಿಯಾಗಿದೆ. ಅದರಲ್ಲೂ ಅಸ್ವಾಭಾವಿಕವಾಗಿ ಸಾವನ್ನಪ್ಪುವ ಆನೆಗಳ ಪೈಕಿ ಬಹುತೇಕ ಆನೆಗಳ ಸಾವಿಗೆ ವಿದ್ಯುತ್ ಅಪಘಾತಗಳು ಕಾರಣ ಎನ್ನುವುದು ಚಿಂತಿಸಬೇಕಾದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಅಕ್ರಮವಾಗಿ ವಿದ್ಯುತ್ ಹರಿಸಿ ಆನೆಗಳ ಸಾವಿಗೆ ಕಾರಣಾಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತಾಗಬೇಕು.

  • ಟಿ.ಜಿ. ಪ್ರೇಮಕುಮಾರ, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು
  • ಆನೆಗಳು ಜನವಸತಿ ಪ್ರದೇಶ, ಕೃಷಿ ಭೂಮಿಗೆ ಬಂದಾಗ ಸಾರ್ವಜನಿಕರು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಅರಣ್ಯ ಇಲಾಖೆಗೆ ಮಾಹಿತಿ ಕೊಡಬೇಕು. ಇಲಾಖೆ ಕೂಡಲೇ ಸ್ಪಂದಿಸುತ್ತದೆ. ಆನೆಗಳನ್ನು ಮರಳಿ ಕಾಡಿಗೆ ಕಳುಹಿಸಲು, ಸಂಭಾವ್ಯ ಅನಾಹುತ ತಪ್ಪಿಸಲು ಇಲಾಖೆ ಸರ್ವ ಸನ್ನದ್ಧವಾಗಿರುತ್ತದೆ. ಆನೆಗಳು ಅಪರೂಪದ ಮತ್ತು ಸೂಕ್ಷ್ಮ ಜೀವಿ. ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಜತೆಗೆ ಆನೆಗಳ ರಕ್ಷಣೆಯೂ ಇಂದಿನ ತುರ್ತು ಆಗತ್ಯವಾಗಿದೆ.
  • ಬಿ.ಎನ್.ಎನ್. ಮೂರ್ತಿ, ಮುಖ್ಯ ಅರಣ್ಯಸಂರಕ್ಷಣಾಧಿಕಾರಿ, ಕೊಡಗು ವೃತ್ತ