ಮಡಿಕೇರಿ:
ಕೊಡಗಿನಲ್ಲಿ ಗರ್ಭಿಣಿ ಆನೆಯೊಂದನ್ನು ಗುಂಡಿಟ್ಟು ಕೊಂದಿರುವ ಪ್ರಕರಣ ಪರಿಸರ ಪ್ರೇಮಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳೆನಾಶ ಮಾಡುತ್ತದೆ ಎನ್ನುವ ಕಾರಣಕ್ಕೆ ಕಾನೂನನ್ನೇ ಕೈಗೆತ್ತಿಕೊಂಡು ಮೂಕ ಪ್ರಾಣಿಯನ್ನು ಹತ್ಯೆ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ. ಜಿಲ್ಲೆಯಲ್ಲಿ ಈ ವರ್ಷ ಇಲ್ಲಿಯ ತನಕ ಮೂರು ಕಾಡಾನೆಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿರುವುದು ಅರಣ್ಯ ಇಲಾಖೆಯನ್ನೂ ಚಿಂತಿಸುವಂತೆ ಮಾಡಿದೆ.
ಅರಣ್ಯ ಇಲಾಖೆ ಮೂಲಗಳ ಪ್ರಕಾರ ಕರ್ನಾಟಕದಲ್ಲಿ ೨೦೨೧ರಲ್ಲಿ ವಿವಿಧ ಕಾರಣಗಳಿಂದ ಒಟ್ಟು ೭೯ ಆನೆಗಳು ಮೃತಪಟ್ಟಿದ್ದರೆ, ೨೦೨೨ರಲ್ಲಿ ೫೨ ಆನೆಗಳು ಸಾವನ್ನಪ್ಪಿದೆ. ಈ ಪೈಕಿ ಒಟ್ಟು ೨೧ ಆನೆಗಳು ವಿದ್ಯುತ್ ಸ್ಪರ್ಶದಿಂದ ಜೀವ ಕಳೆದುಕೊಂಡಿದೆ. ಈ ವರ್ಷ ಇಲ್ಲಿಯ ತನಕ ೨೦೨೩ರಲ್ಲಿ ಕೊಡಗು ಜಿಲ್ಲೆ ಒಂದರಲ್ಲೇ ೩ ಕಾಡಾನೆಗಳು ಅಸ್ವಾಭಾವಿಕ ಕಾರಣಗಳಿಂದ ಜೀವ ತೆತ್ತಿವೆ. ಸೋಮವಾರಪೇಟೆ ವಲಯದಲ್ಲಿ ಒಂದು ಮತ್ತು ಕುಶಾಲನಗರ ವಲಯದಲ್ಲಿ ಒಂದು ಕಾಡಾನೆ ತೆರೆದ ಬಾವಿಗೆ ಬಿದ್ದು ಮೃತಪಟ್ಟಿದ್ದರೆ, ಭಾನುವಾರ (ಮೇ ೨೧) ಗರ್ಭಿಣಿ ಆನೆ ಗುಂಡೇಟಿಗೆ ಬಲಿಯಾಗಿದೆ.
ಆನೆಗಳ ಜನಸಂಖ್ಯೆಗೆ ಹೋಲಿಸಿದರೆ ಸ್ವಾಭಾವಿಕವಾಗಿ ಮತಪಡುವ ಆನೆಗಳ ಪ್ರಮಾಣ ಸಹಜವಾಗಿಯೇ ಇದೆ ಎನ್ನುವ ವನ್ಯಜೀವಿ ತಜ್ಞರು ವಿವಿಧ ಕಾರಣಗಳಿಂದ ಅಸ್ವಾಭಾವಿಕವಾಗಿ ಮತ್ತು ವಿದ್ಯುತ್ ಸ್ಪರ್ಶದಿಂದ ಮತಪಡುತ್ತಿರುವ ಆನೆಗಳ ಸಂಖ್ಯೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಗುಂಡಿಟ್ಟು ಆನೆಗಳನ್ನು ಕೊಲ್ಲುವ ನಿರ್ದಯಿ ಮನುಷ್ಯರ ಬಗ್ಗೆ ಭಾರಿ ಆಕ್ರೋಶ ಮಾತುಗಳು ಕೇಳಿಬರುತ್ತಿದೆ. ದಂತಕ್ಕಾಗಿ ಆನೆಗಳನ್ನು ಕೊಲ್ಲುವ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಕಡಿಮೆ ಆಗಿದ್ದರೂ ಬೆಳೆ ರಕ್ಷಣೆ, ಫಸಲು ಹಾನಿ ತಡೆಗಾಗಿ ಆನೆಗಳ ಕಡೆಗೆ ಬಂದೂಕು ಗುರಿ ಇಡುವ ಕ್ರೂರತೆ ಮಾತ್ರ ಇನ್ನೂ ಕಂಡು ಬರುತ್ತಿದೆ.
ತೋಟಕ್ಕೆ, ಊರಿಗೆ ದಾಳಿ ಇಡುವ ಆನೆಗಳನ್ನು ಕೊಲ್ಲುವುದರಿಂದ ಸಮಸ್ಯೆಗೆ ಪರಿಹಾರ ಸಿಕ್ಕುವುದಿಲ್ಲ. ಒಂದು ಆನೆ ಸತ್ತರೆ ಪರಿಸರದ ಅಮೂಲ್ಯ ಕೊಂಡಿಯೊಂದು ಕಳಚಿದಂತೆ ಎನ್ನುವ ಸತ್ಯ ಆನೆ ಹಂತಕ ಮನಸ್ಸುಗಳಿಗೆ ಅರಿವಾಗಬೇಕಿದೆ ಎನ್ನುತ್ತಾರೆ ವನ್ಯಜೀವಿ ಪ್ರೇಮಿಗಳು. ಆನೆಗಳು ದೊಡ್ಡ ದೇಹದ ಪ್ರಾಣಿಗಳಾದರೂ ತುಂಬಾ ಸೂಕ್ಷ್ಮ ಜೀವಿಗಳು. ನೀರು, ಗಾಳಿ, ಆಹಾರ, ಹವಾಮಾನ ತಮಗೆ ಅನುಕೂಲ ಇದ್ದ ಸ್ಥಳದಲ್ಲಿ ಮಾತ್ರ ಇವು ನೆಲೆ ನಿಲ್ಲುವುದರಿಂದ ಆ ಜಾಗದ ಪರಿಸರ ಸಮತೋಲನದಿಂದ ಕೂಡಿದೆ ಎನ್ನುವುದನ್ನು ಮೊದಲು ಅರ್ಥೈಸಿಕೊಳ್ಳಬೇಕು ಎನ್ನುವುದು ಪರಿಸರ ಪ್ರೇಮಿಗಳ ಕಿವಿ ಮಾತು.
ತಮ್ಮ ಜಮೀನಿಗೆ ಅಥವಾ ಊರಿಗೆ ಕಾಡಾನೆಗಳು ಬಂದಾಗ ಅವುಗಳಿಗೆ ಎದುರಾಗಿ ಬಂದೂಕು ಎತ್ತಿಕೊಳ್ಳುವ ಮೊದಲು ಮುಂದಿನ ಪರಿಣಾಮಗಳ ಬಗ್ಗೆ ಜಾಗೃತರಾಗಬೇಕಿದೆ. ಕಾಡಾನೆ ಗುಂಡಿಟ್ಟು ಕೊಂದರೆ ವಿವಿಧ ಕಾನೂನುಗಳ ಪ್ರಕಾರ ಕನಿಷ್ಠ ೭ ವರ್ಷ ಜೈಲು ಶಿಕ್ಷೆ ಖಚಿತ. ಇದರ ಜತೆಗೆ ಕಾನೂನು ಹೋರಾಟ ಸೇರಿದಂತೆ ಇತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಶಾಲನಗರ ವಲಯದಲ್ಲಿ ನಡೆದ ಪ್ರಕರಣದಲ್ಲಿ ಏನೂ ತೊಂದರೆ ಕೊಡದೆ ತನ್ನ ಪಾಡಿಗೆ ತಾನು ಎಂಬಂತೆ ಇದ್ದ ಗರ್ಭಿಣಿ ಕಾಡಾನೆಗೆ ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದಾರೆ. ಹೆಣ್ಣಾನೆ ಮಾತ್ರವಲ್ಲದೆ ಇನ್ನೇನು ಭೂಮಿಗೆ ಬರಲು ತಯಾರಾಗಿದ್ದ ಅದರ ಗರ್ಭದಲ್ಲಿದ್ದ ಕಂದಮ್ಮನ ಕೊಲೆಗೂ ದುಷ್ಕರ್ಮಿಗಳು ಕಾರಣರಾಗಿದ್ದಾರೆ.
ಕೊಡಗಿನಲ್ಲಿ ಮಾನವ, ವನ್ಯಜೀವಿ ಸಂಘರ್ಷ ಸಾಮಾನ್ಯವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸದ ಹೊರತೂ ಜನಸಾಮಾನ್ಯರ ಬವಣೆ ಕಡಿಮೆ ಆಗುವುದಿಲ್ಲ. ಹಾಗೆಂದು ಕಾನೂನು ಕೈಗೆತ್ತಿಕೊಳ್ಳುವುದು ಕೂಡ ಇದಕ್ಕೆ ಪರಿಹಾರ ಆಗುವುದಿಲ್ಲ. ಅಮೂಲ್ಯ ವನ್ಯ ಸಂಪತ್ತು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜತೆ ಸಹಕರಿಸುವುದು ಅನಿವಾರ್ಯ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ತಮ್ಮ ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆ ಕಂಡು ಬಂದ ಕೂಡಲೇ ಅರಣ್ಯ ಇಲಾಖೆ ಗಮನಕ್ಕೆ ತರುವುದು ಸ್ಥಳೀಯರ ಕರ್ತವ್ಯವಾಗಿದೆ. ಆನೆಗಳನ್ನು ಓಡಿಸಲು ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಇದಕ್ಕಾಗಿ ಎಲಿಫೆಂಟ್ ಟಾಸ್ಕ್ ಫೋರ್ಸ್ ಕೂಡ ಇದ್ದು, ಮಾಹಿತಿ ಸಿಕ್ಕಿದ ಕೂಡಲೇ ಕಾರ್ಯಾಚರಣೆಗೆ ಸರ್ವಸನ್ನದ್ಧವಾಗಿರುತ್ತದೆ. ಆನೆಗಳಿಂದ ಫಸಲು ನಷ್ಟವಾದರೆ ಕೊಡುವ ಪರಿಹಾರದ ಮೊತ್ತವೂ ಈಗ ಹೆಚ್ಚಾಗಿದೆ. ಕಾಫಿ ಗಿಡಗಳು ಹಾಳಾದರೆ ಅವುಗಳ ವಯಸ್ಸಿನ ಆಧಾರದಲ್ಲಿ ೩ ಸಾವಿರ ರೂ. ತನಕ ಪರಿಹಾರ ಸಿಗುತ್ತದೆ. ಕಳೆದ ವರ್ಷ ಜಿಲ್ಲೆಯಲ್ಲಿ ವನ್ಯಜೀವಿಗಳಿಂದ ಆದ ಬೆಳೆಹಾನಿಗೆ ರಾಜ್ಯದಲ್ಲೇ ಅತ್ಯಧಿಕ ಅಂದರೆ ೬.೫ ಕೋಟಿ ರೂ. ಪರಿಹಾರ ಕೊಡಲಾಗಿದೆ. ಸೌರ ಬೇಲಿ ನಿರ್ಮಾಣಕ್ಕೆ ಇಲಾಖೆಯಿಂದ ಶೇ.೫೦ರಷ್ಟು ಸಬ್ಸಿಡಿಯೂ ಸಿಗುತ್ತದೆ. ಕಳೆದ ವರ್ಷ ಕೊಡಗಿನಲ್ಲಿ ಸೌರಬೇಲಿ ಅಳವಡಿಸಿಕೊಂಡವರಿಗೆ ೧.೫ ಕೊಟಿ ರೂ. ಸಬ್ಸಿಡಿ ನೀಡಲಾಗಿದೆ. ಹಾಗಾಗಿ ಕಾಡಾನೆ ಸೇರಿದಂತೆ ವನ್ಯಜೀವಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳದೆ ಸಮಸ್ಯೆ ಪರಿಹಾರಕ್ಕೆ ಅರಣ್ಯ ಇಲಾಖೆ ಜತೆ ಕೈ ಜೋಡಿಸುವಂತೆ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಾರೆ.
ಕುಶಾಲನಗರ ವಲಯದಲ್ಲಿ ನಡೆದಿರುವ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಆನೆಯನ್ನು ಗುಂಡಿಟ್ಟು ಕೊಂದವರಿಗೆ ಕನಿಷ್ಠ ೭ ವರ್ಷ ಜೈಲು ಶಿಕ್ಷೆ ಆಗುವುದಂತೂ ಖಚಿತ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇಲ್ಲ. ಕಾಡಾನೆ ಸಮಸ್ಯೆ ಇದ್ದರೆ ಸಾರ್ವಜನಿಕರು ಅರಣ್ಯ ಇಲಾಖೆ ಗಮನಕ್ಕೆ ತರಲಿ. ಅಂತಹ ಸಮಸ್ಯೆಗೆ ಪರಿಹಾರ ಕಲ್ಪಿಸಲು ಇಲಾಖೆ ಬಳಿ ಬೇಕಾದಷ್ಟು ದಾರಿಗಳಿವೆ. ಸಾರ್ವಜನಿಕರು ಇಲಾಖೆ ಜತೆ ಸಹಕರಿಸಬೇಕು.
ಬಿ.ಎನ್.ಎನ್. ಮೂರ್ತಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು