ಜಿಲ್ಲೆ

ಮಂದಲಗೆರೆ ಅರಣ್ಯದಲ್ಲಿ ಹೆಣ್ಣಾನೆ ಕಳೇಬರ ಪತ್ತೆ

ಎ. ಆರ್. ರಘುರಾಮ

ಹನೂರು : ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ದೊಡ್ಡಸಂಪಿಗೆ ಮಂದಲಗೆರೆ ಮೀಸಲು ಅರಣ್ಯ ಪ್ರದೇಶದಲ್ಲಿ ಸೋಮವಾರ 35 ವರ್ಷದ ಹೆಣ್ಣಾನೆಯ ಮೃತದೇಹ ಪತ್ತೆಯಾಗಿದೆ. ಬೈಲೂರು ವನ್ಯಜೀವಿ ವಲಯದಲ್ಲಿ ಸೋಮವಾರ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಆನೆ ಕಳೇಬರ ಕಂಡಿದೆ. ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಡಿಸಿಎಫ್ ದೀಪಾ ಮಾರ್ಗದರ್ಶನದಲ್ಲಿ ಎಸಿಎಫ್ ನಂದಗೋಪಾಲ್ ಮತ್ತು ತಂಡದವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪಶು ವೈದ್ಯಾಧಿಕಾರಿ ಡಾ. ಶಿವರಾಜು ಮರಣೋತ್ತರ ಪರೀಕ್ಷೆ ನಡೆಸಿ ಆನೆ ಇತ್ತೀಚೆಗೆ ಸ್ವಾಭಾವಿಕವಾಗಿ ಮೃತಪಟ್ಟಿರುವುದಾಗಿ ವರದಿ ನೀಡಿದ್ದಾರೆ. ಸ್ಥಳದಲ್ಲೇ ಆನೆ ಅಂತ್ಯಕ್ರಿಯೆ ಮಾಡಲಾಯಿತು.