ಜಿಲ್ಲೆ

ಹಾರಂಗಿಯಲ್ಲಿ ವಿಶ್ವ ಆನೆ ದಿನಾಚರಣೆ ಸಂಭ್ರಮ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಲ್ಲೂ ಆನೆಗಳ ಸಾಫ್ಟ್ ರಿಲೀಸ್ ಯೋಜನೆ ಸಂಬAಧ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರ ಜತೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ತಿಳಿಸಿದ್ದಾರೆ. ಹಾರಂಗಿ ಸಾಕಾನೆ ಶಿಬಿರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಆನೆ ದಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಭದ್ರಾ ಅಭಯಾರಣ್ಯದಲ್ಲಿ ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶವನ್ನು ಗುರುತಿಸಿ ರೈಲ್ವೇ್ವ ಕಂಬಿಗಳನ್ನು ಅಳವಡಿಸಿ ಸೆರೆ ಹಿಡಿದ ಕಾಡಾನೆಗಳನ್ನು ಆ ಜಾಗದಲ್ಲಿ ಬಿಡುವ ಸಾಫ್ಟ್ ರಿಲೀಸ್ ಯೋಜನೆ ರೂಪಿಸಲಾಗಿದೆ. ಇದೇ ಮಾದರಿಯಲ್ಲಿ ಕೊಡಗಿನಲ್ಲಿಯಲ್ಲಿಯೂ ಅಕ್ಕ ಪಕ್ಕದ ಮೂರು ಜಿಲ್ಲೆಗಳಿಗೆ ಅನುಕೂಲವಾಗುವಂತೆ ಸಾಫ್ಟ್ ರಿಲೀಸ್ ಯೋಜನೆಯನ್ನು ಅರಣ್ಯ ಇಲಾಖೆ ವತಿಯಿಂದ ಕಾರ್ಯಗತಗೊಳಿಸಲು ಈಗಾಗಲೇ ಚಿಂತನೆ ಹರಿಸಲಾಗಿದೆ.

ವಿಶ್ವದಲ್ಲಿ ಸುಮಾರು 4 ಲಕ್ಷ 15. ಸಾವಿರದಷ್ಟು ಆನೆಗಳಿದ್ದು, ಭಾರತದಲ್ಲಿ 27 ಸಾವಿರದಷ್ಟು ಆನೆಗಳು ಇವೆ. ಈ ಪೈಕಿ ಕರ್ನಾಟಕದಲ್ಲಿ 6,395 ಆನೆಗಳಿವೆ. ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಕಾಡಾನೆಗಳು ಇವೆ. ಅದರಲ್ಲಿಯೂ ರಾಜ್ಯದ 7 ಜಿಲ್ಲೆ ಗಳಲ್ಲಿ ಕಾಡಾನೆಗಳ ಸಂಖ್ಯೆ ಜಾಸ್ತಿ ಇದೆ. 2016ರ ಅಂಕಿ ಅಂಶಗಳ ಪ್ರಕಾರ ವಿಶ್ವದಲ್ಲಿ 1 ಲಕ್ಷ 10 ಸಾವಿರದಷ್ಟು ಆನೆಗಳ ಸಂತತಿಯು ಕಡಿಮೆಯಾಗಿರುವುದು ಅಂತಕಕಾರಿಯಾಗಿದೆ. ಅಲ್ಲದೆ ಪ್ರಕೃತಿಯಲ್ಲಿ ಕಾಡಾನೆಗಳು ವಹಿಸುವ ಪಾತ್ರ ಮುಖ್ಯವಾಗಿರುತ್ತದೆ.

ಆನೆ ಹಾಗೂ ಮಾನವ ಸಂಘರ್ಷಕ್ಕೆ ಶಾಶ್ವತವಾದ ಪರಿಹಾರೋಪಾಯಗಳನ್ನು ಕಂಡು ಹಿಡಿಯುವುದು ಬಹು ಮುಖ್ಯ. ಅದರ ಜತೆಯಲ್ಲಿ ಅನೆಗಳ ಸಂರಕ್ಷಣೆಗೆ ವೈಜ್ಞಾನಿಕವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರಲ್ಲದೆ ಪರಿಸರ, ಪ್ರಕೃತಿ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು ಮಾತನಾಡಿ, ಕಾಡಾನೆಗಳ ರಕ್ಷಣೆ ಕೇವಲ ಇಲಾಖೆ ಅಥವಾ ಸರ್ಕಾರದ ಜವಾಬ್ದಾರಿಯಲ್ಲ. ಇಲ್ಲಿ ಕಾಡಂಚಿನ ಜನರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬಹು ಮುಖ್ಯವಾಗಿರುತ್ತದೆ ಎಂದರು.

ಮಡಿಕೇರಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಭಿಷೇಕ್, ತಿತಿಮತಿ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕೆ. ಗೋಪಾಲ್, ವನ್ಯಜೀವಿ ವಿಭಾಗದ ಉಪ ಸಂರಕ್ಷಣಾ ಅಧಿಕಾರಿ ಕಾರ್ಯಪ್ಪ, ನಿವೃತ್ತ ಪಶುವೈದ್ಯಾಧಿಕಾರಿ ಡಾ. ಚೆಟ್ಟಿಯಪ್ಪ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಭುವನೇಶ್ ಕೂಕ್ಕೆ, ಸೋಮವಾರಪೇಟೆ ಪದವಿಪೂರ್ವ ಕಾಲೇಜು ಉಪನ್ಯಾಸಕ ಶಶಿಧರ್, ಪುಷ್ಪಗಿರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಕೆ. ದಿನೇಶ್, ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಸೇರಿದಂತೆ ಹಲವರು ಇದ್ದರು.

ಆನೆ ಹಬ್ಬದ ಅಂಗವಾಗಿ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಸಂಕೇತ ಪೂವಯ್ಯ ವಿತರಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಆನೆಗಳ ಸಂರಕ್ಷಣೆ, ಪರಿಸರ, ಪ್ರಕೃತಿಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಲಾಯಿತು.

ಆನೆ ಹಬ್ಬ ದಿನದ ಅಂಗವಾಗಿ ಹಾರಂಗಿಯಲ್ಲಿರುವ ಸಾಕಾನೆಗಳಾದ ಲಕ್ಷ್ಮಣ, ಏಕದಂತ, ರಾಮ, ವಿಕ್ರಮ, ಈಶ್ವರ, ಕರ್ಣ ಆನೆಗಳನ್ನು ಸಿಂಗಾರ ಮಾಡಲಾಗಿತು, ಇದಕ್ಕೂ ಮೊದಲು ಸಾಕಾನೆಗಳಿಗೆ ಪೂಜೆ ಸಲ್ಲಿಸಿ ವಿವಿಧ ಬಗೆಯ ಆಹಾರಗಳನ್ನು ನೀಡಲಾಯಿತು.