ತೀರ್ಥಹಳ್ಳಿ: ತಾಲೂಕಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು ಇದೀಗ ಸಿಂಗನಬಿದಿರೆ ಗ್ರಾಪಂ ವ್ಯಾಪ್ತಿಯ ತಳಲೆ ಭಾಗದಲ್ಲಿ ಭಾನುವಾರ ರಾತ್ರಿ ಕಾಡಾನೆಯೊಂದು ಗದ್ದೆ, ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ.
ಪರಿಣಾಮ ಫಸಲು ಬರುತ್ತಿದ್ದ ಅಡಕೆ ಗಿಡಗಳು, ಭತ್ತ ನೆಲ ಕಚ್ಚಿದೆ. ತೋಟದ ಗೇಟುಗಳನ್ನು ಪುಡಿಗೈದಿದ್ದು ಕಾಡಾನೆ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ನಿರ್ಮಲಾ, ಯೋಗೀಶ್, ಪದ್ಮಾವತಿ, ಉದಯ ಶೆಟ್ಟಿ, ಪುಷ್ಪಾ, ಸೀತಾಲಕ್ಷ್ಮೀ ಅವರ ಗದ್ದೆ, ತೋಟಗಳಿಗೆ ಹಾನಿ ಸಂಭವಿಸಿದೆ. ಸಕ್ರೆಬೈಲು ಅಭಯಾರಣ್ಯದ ಕಡೆಯಿಂದ ಆನೆಗಳು ಆಗಮಿಸುತ್ತಿದ್ದು ಅರಣ್ಯಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಂಡಗದ್ದೆ ಸಹಕಾರ ಸಂಘದ ನಿರ್ದೇಶಕ ತಳಲೆ ಪ್ರಸಾದ್ ಶೆಟ್ಟಿ ಆಗ್ರಹಿಸಿದ್ದಾರೆ.