ಜಿಲ್ಲೆ

ಆನೆಗಳ ದಾಳಿಗೆ ಬೆಳೆ ನಾಶ

Mysuru - Desk - Yashavanth Kumar N

ಸೋಮವಾರಪೇಟೆ: ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಕೃಷಿ ಫಸಲನ್ನು ತಿಂದು ನಾಶಪಡಿಸುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಗೋಣಿಮರೂರು ಗ್ರಾಮದ ಸೂರಿ ಎಂಬುವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸಿಹಿ ಗೆಣಸು ಬೆಳೆಯನ್ನು ತಡರಾತ್ರಿ ಕಾಡಾನೆಗಳ ಹಿಂಡು ತಿಂದು ಹಾಳು ಮಾಡಿವೆ. ಗ್ರಾಮ ನಿವಾಸಿಗಳಿಗೆ ಕೃಷಿಯೇ ಜೀವನಾಧಾರವಾಗಿದೆ. ಆದರೆ ಕಾಡಾನೆಗಳು ಫಸಲನ್ನು ನಾಶ ಮಾಡುತ್ತಿವೆ. ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಭಾಗದ ಮೀಸಲು ಅರಣ್ಯದ ಸುತ್ತ ಸೋಲಾರ್ ತಂತಿ ಅಳವಡಿಸಿದ್ದರೂ ನಿರ್ವಹಣೆ ಇಲ್ಲದೆ ಹಾಳಾಗಿರುವುದರಿಂದ ಕಾಡಾನೆಗಳ ಉಪಟಳ ಹೆಚ್ಚಿದೆ. ಅರಣ್ಯ ಇಲಾಖೆಯವರು ಸ್ಥಳೀಯರಿಗೆ ಆನೆ ಓಡಿಸಲು ಯಾವುದೇ ಉಪಕರಣಗಳು ಮತ್ತು ಪಟಾಕಿಗಳನ್ನು ನೀಡುತ್ತಿಲ್ಲ. ನಮ್ಮ ಭಾಗದ ಅರಣ್ಯಕ್ಕೆ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು ಎಂದು ರೈತರಾದ ತ್ಯಾಗರಾಜು, ಭರತ್, ನಂದಕುಮಾರ್ ಆಗ್ರಹಿಸಿದ್ದಾರೆ.