ಸಿದ್ದಾಪುರ:
ವಿರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಯಲ್ಲಿ ಆಗಾಗ್ಗೆ ಕಾಣಿಸಿಕೊಂಡು ಭೀತಿ ಸೃಷ್ಟಿಸುತ್ತಿದ್ದ ಕಾಡಾನೆ ಈಗ ನೇರವಾಗಿ ಪಟ್ಟಣಕ್ಕೆ ಕಾಲಿಟ್ಟಿದೆ. ಬುಧವಾರ ರಾತ್ರಿ ೧೧ ಗಂಟೆ ಸುಮಾರಿಗೆ ಸಿದ್ದಾಪುರ ಬಸ್ ನಿಲ್ದಾಣ ಬಳಿ ಕಾಡಾನೆ ಪ್ರತ್ಯಕ್ಷವಾಗಿದೆ. ಆನೆಯನ್ನು ಮೊದಲು ನೋಡಿದ ಆಟೋ ಚಾಲಕ ಜಲೀಲ್ ಎಂಬವರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಸಾರ್ವಜನಿಕರು ಸುರಕ್ಷಿತ ಸ್ಥಳ ಸೇರಿಕೊಂಡಿದ್ದಾರೆ. ಆಟೋ ಚಾಲಕ ಜಲೀಲ್ ಸಕಾಲದಲ್ಲಿ ಎಚ್ಚೆತ್ತುಕೊಂಡು ಇತರರನ್ನು ಎಚ್ಚರಿಸಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ.
ಈ ಆನೆ ಕುರುಬರು ಮೊಟ್ಟೆ ತೋಟ ಬಳಿಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಕರಡಿಗೋಡು ರಸ್ತೆಗೆ ಹೋಗಲು ಯತ್ನಿಸಿದೆ. ಈ ಸಂದರ್ಭ ಗ್ರಾಮ ಪಂಚಾಯಿತಿ ಮುಂಭಾಗದ ಮುಸ್ತ್ತಾಫ ಎಂಬವರ ಮನೆಯ ಬಳಿ ತೆರಳಿ ಕಾಂಪೌಂಡ್‌ಗೆ ಹಾನಿ ಮಾಡಿದೆ. ಈ ವೇಳೆ ಸ್ಥಳೀಯರು ಜೋರಾಗಿ ಕಿರುಚಿದ್ದರಿಂದ ಕಾಡಾನೆ ಬಂದ ದಾರಿಯಲ್ಲೇ ವಾಪಸಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರು.
ಜನವಸತಿ ಪ್ರದೇಶಕ್ಕೆ ಕಾಡಾನೆ ನುಗ್ಗಿದ್ದರಿಂದ ಸ್ಥಳಿಯರು ಭೀತಿಗೆ ಒಳಗಾಗಿದ್ದಾರೆ. ಕತ್ತಲಾದ ನಂತರ ಹೊರಗೆ ಸುತ್ತಾಡಲು ಭಯ ಪಡುವಂತಾಗಿದೆ. ಕಾಡಾನೆಯ ರಾತ್ರಿ ಸಂಚಾರವನ್ನು ಸ್ಥಳೀಯರು ವೀಡಿಯೋ ಮಾಡಿಕೊಂಡಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ.