ಅರಕಲಗೂಡು ತಾಲೂಕು ಕೊಣನೂರು ಹೋಬಳಿಯ ಕೆಸವತ್ತೂರು ಬಳಿ ಬುಧವಾರ ಜೋಳದ ಹೊಲದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು. 
ಜಿಲ್ಲೆ

ಮುಂದುವರಿದ ಕಾಡಾನೆಗಳ ದಾಂಧಲೆ

ನಾಗೇಶ ಎಸ್

ಅರಕಲಗೂಡು: ತಾಲೂಕಿನ ಕೊಣನೂರು ಹೋಬಳಿಯ ರೈತರಲ್ಲಿ ಭೀತಿ ಮೂಡಿಸಿರುವ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಬುಧವಾರ ಹಲವೆಡೆ ಬೆಳೆ ತುಳಿದು ದಾಂಧಲೆ ನಡೆಸಿವೆ.

ಕೊಡಗಿನ ಗಡಿ ಭಾಗದಿಂದ ಬಂದಿರುವ ಐದು ಕಾಡಾನೆಗಳು ಮಂಗಳವಾರ ಹೊಸನಗರ ಭಾಗದಲ್ಲಿ ಬೆಳೆಗಳನ್ನು ತಿಂದು ತುಳಿದು ಜೋಳದ ಹೊಲದಲ್ಲಿ ಬೀಡು ಬಿಟ್ಟಿದ್ದವು. ಸಂಜೆವರೆಗೂ ಕದಲದೆ ಜೋಳದ ಹೊಲದಲ್ಲೇ ನಿಂತಿದ್ದ ಆನೆಗಳು ರಾತ್ರಿ ವೇಳೆಗೆ ಹೊಡೆನೂರು- ಲಕ್ಷ್ಮೀಪುರ ಹಳ್ಳದಲ್ಲಿ ವಿಶ್ರಾಂತಿ ಪಡೆದಿವೆ. ಬೆಳಗ್ಗೆ ಮಾಳೇನಹಳ್ಳಿ, ಅಕ್ಕಲವಾಡಿ, ಕೆಸವತ್ತೂರು ಕಡೆಗೆ ಲಗ್ಗೆ ಇಟ್ಟಿವೆ.

ಕೆಸವತ್ತೂರು, ಸಬ್ಬತ್ತಿಯ ಮಲ್ಲಿಪಟ್ಟಣ ರಸ್ತೆ ಬಳಿ ಜೋಳದ ಹೊಲದಲ್ಲಿ ಅಡ್ಡಾಡುತ್ತಾ ದಿನವಿಡೀ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ. ಬೆಳೆಗಳನ್ನು ತಿಂದು ತುಳಿದು ಲೂಟಿ ಮಾಡುತ್ತಿರುವ ಕಾಡಾನೆಗಳು ಕಾಡಿಗೆ ಮರಳದೆ ಜನರ ಕಿರುಚಾಟಕ್ಕೂ ಜಗ್ಗದೆ, ಅರಣ್ಯ ಇಲಾಖೆ ಸಿಬ್ಬಂದಿಗೂ ಚಳ್ಳೆ ಹಣ್ಣು ತಿನಿಸುತ್ತಿವೆ. ಜನವಸತಿ ಹಳ್ಳಿಗಳತ್ತ ನುಗ್ಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಜಾಗೃತಿ ವಹಿಸಿದ್ದು, ಆನೆಗಳ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ.

ಹಾಡಹಗಲೇ ಭತ್ತದ ಬೆಳೆ, ಶುಂಠಿ, ಜೋಳದ ಜಮೀನು ತುಳಿದು ಬೆಳೆಗಳನ್ನು ನಾಶ ಪಡಿಸುತ್ತಿದ್ದು, ರೈತರಿಗೆ ಅಪಾರ ಹಾನಿ ಉಂಟಾಗಿದೆ. ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.