ಬ್ಯಾಡಗಿ: ಕೃಷಿ ಕೆಲಸದಲ್ಲಿ ತೊಡಗಿದ್ದ ರೈತ ಹಾಗೂ ಎರಡು ಎತ್ತು ವಿದ್ಯುತ್ ವೈರ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ಸಂತೋಷ ಪ್ರಭುಗೌಡ ಹೊಮ್ಮರಡಿ (22) ಮೃತ ರೈತ. ಕಳೆದ ಎರಡು ದಿನಗಳಿಂದ ಹದ ಮಳೆಯಾಗಿದ್ದರಿಂದ ರೈತ ಸಂತೋಷ ಹೊಲದಲ್ಲಿ ಕ್ಯಾಬೀಜ್ ಸಸಿ ನೆಡುವುದಕ್ಕಾಗಿ ಸಾಲು ಹೊಡೆಯಲು ಎತ್ತುಗಳೊಂದಿಗೆ ತೆರಳಿದ್ದರು.
ಸಾಲು ಹೊಡೆಯುವಾಗ ಹೊಲದಲ್ಲಿ ಹಾಯ್ದು ಹೋಗಿರುವ ವಿದ್ಯುತ್ ವೈರ್‌ಗೆ ಎತ್ತಿನ ಕೋಡು ಸಿಲುಕಿಕೊಂಡಿವೆ. ಹಸಿಯಾಗಿದ್ದ ಉಳುಮೆ ನೊಗ ಹಾಗೂ ಪಕ್ಕದ ಎತ್ತಿಗೆ ವೈರ್ ತಗುಲಿದೆ. ಇದರಿಂದ ಎತ್ತುಗಳು ಒದ್ದಾಡುತ್ತಿದ್ದವು. ಎತ್ತುಗಳ ಸಂಕಟ ನೋಡಲಾಗದೇ ರೈತ ಸಂತೋಷ, ವೈರ್ ಬೇರ್ಪಡಿಸಲು ಮುಂದಾದಾಗ ಆತನಿಗೂ ವಿದ್ಯುತ್ ತಗುಲಿದೆ. ಇಷ್ಟಾರಲ್ಲಾಗಲೇ ಎರಡು ಎತ್ತುಗಳು ಮೃತಪಟ್ಟಿವೆ. ಬಳಿಕ ಪಕ್ಕದ ಹೊಲದವರು ಚೀರಾಟ ಕೇಳಿ ಸ್ಥಳಕ್ಕೆ ಬಂದು ಸಂತೋಷನನ್ನು ಹೆಚ್ಚಿನ ಉಪಚಾರಕ್ಕೆ ಬ್ಯಾಡಗಿ ತಾಲೂಕು ಆಸ್ಪತ್ರೆಗೆ ಕರೆತಂದರು. ವೈದ್ಯರು ಪರೀಕ್ಷಿಸಿ ಸಂತೋಷ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.