ಮೈಸೂರು: ರಾಜ್ಯದ ಎಲ್ಲ ರೈಲ್ವೆ ಮಾರ್ಗಗಳನ್ನು 2025ರೊಳಗೆ ವಿದ್ಯುದ್ದೀಕರಣ ಮಾಡುವ ಗುರಿ ಹೊಂದಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ನೈಋತ್ಯ ರೈಲ್ವೆಯ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ 2ನೇ ಪ್ರವೇಶ ದ್ವಾರದ ಹೊಸ ಟಿಕೆಟ್ ಬುಕ್ಕಿಂಗ್ ಕಚೇರಿ ಉದ್ಘಾಟನೆ ಹಾಗೂ ಮೈಸೂರಿನಿಂದ ಅಶೋಕಪುರಂ ರೈಲು ನಿಲ್ದಾಣವರೆಗೆ ರೈಲುಗಳ ಸೇವೆಗೆ ವಿಸ್ತರಣೆಗೆ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನಿರ್ದೇಶನದ ಮೇರೆಗೆ ವಿದ್ಯುದ್ದೀಕರಣ ಕೈಗೆತ್ತಿಕೊಳ್ಳಲಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಎಲ್ಲ ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದು ನಿಶ್ಚಿತ ಎಂದು ಭರವಸೆ ನೀಡಿದರು.
ಈ ಹಿಂದೆ ರೈಲ್ವೆ ಲೆವಲ್ ಕ್ರಾಸ್‌ನಲ್ಲಿ ರೈಲ್ವೆ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣವನ್ನು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಕೈಗೊಳ್ಳಲಾಗುತಿತ್ತು. ಆದರೆ, ಇದೀಗ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರ ನೀಡಲಾಗುತ್ತಿದೆ. ಮೈಸೂರಿನ ಚಾಮರಾಜಪುರಂ ರೈಲ್ವೆ ಲೆವಲ್‌ಕ್ರಾಸ್‌ನಲ್ಲಿ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
2013ರವರೆಗೆ ಕೇಂದ್ರ ಸರ್ಕಾರ ಒಂದು ರಾಜ್ಯಕ್ಕೆ ರೈಲ್ವೆ ಯೋಜನೆಗೆ 835 ಕೋಟಿ ರೂ.ಗಳನ್ನು ಮಾತ್ರ ನೀಡುತಿತ್ತು. ಆದರೆ, ಪ್ರಸ್ತುತ 7,564 ಕೋಟಿ ರೂ.ನೀಡಲಾಗುತ್ತಿದೆ. ರಾಜ್ಯದಲ್ಲಿ 33 ಸಾವಿರ ಕೋಟಿ ರೂ.ಗಳ ಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ. 50 ವರ್ಷ ಗಳಲ್ಲಿ ಆಗದೆ ಇರುವ ಸಾಧನೆ 10 ವರ್ಷಗಳಲ್ಲಿ ಆಗಿದೆ ಎಂದರು.
ಈ ಹಿಂದೆ ರೈಲ್ವೆಗೆ ಪ್ರತ್ಯೇಕ ಬಜೆಟ್ ಇತ್ತು. ಆದರೆ, ಜಿಲ್ಲಾ ಕೇಂದ್ರದ ನಿಲ್ದಾಣಕ್ಕೆ ಒಂದು ವರ್ಷಕ್ಕೆ 5 ಲಕ್ಷ ರೂ.ಸಹ ದೊರೆಯುತ್ತಿರಲಿಲ್ಲ. ಆದರೆ, ಇದೀಗ ರೈಲ್ವೆ ಬಜೆಟ್‌ಅನ್ನು ಕೇಂದ್ರ ಬಜೆಟ್‌ನೊಂದಿಗೆ ವಿಲೀನ ಮಾಡಿ ಹೆಚ್ಚಿನ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆಗೆ 2.65 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದ್ದು, ಭಾರತೀಯ ರೈಲ್ವೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕಾರ್ಯವನ್ನು ಕೇಂದ್ರ ಕೇಂದ್ರ ಸರ್ಕಾರ ಮಾಡಿದೆ. ಕೇವಲ ರೈಲ್ವೆ ಮಾತ್ರವಲ್ಲ ಎಲ್ಲ ಇಲಾಖೆಗಳಿಗೂ ಒತ್ತು ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 10 ವರ್ಷಗಳಲ್ಲಿ 37 ಸಾವಿರ ಕೋಟಿ ರೂ.ಮೊತ್ತದ ರೈಲ್ವೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಪ್ರಸಕ್ತ ವರ್ಷ ತುಮಕೂರು-ರಾಯದುರ್ಗ, ತುಮಕೂರು-ಚಿತ್ರದುರ್ಗ-ದಾವಣಗೆರೆ, ಬಾಗಲಕೋಟೆ-ಕುಡಚಿ, ಧಾರವಾಡ-ಬೆಳಗಾವಿ, ಹುಬ್ಬಳ್ಳಿ- ಅಂಕೋಲ, ಗದಗ-ವಾಡಿ, ಗಿರಿಗೇನ-ರಾಯಚೂರು, ಶಿವಮೊಗ್ಗ-ರಾಣೆಬೆನ್ನೂರು, ಕಡೂರು-ಚಿಕ್ಕಮಗಳೂರು, ಬೇಲೂರು- ಹಾಸನ, ಮಾರಿಕೊಪ್ಪ-ಕುಪ್ಪಂ ಮುಂತಾದ ಯೋಜನೆಗಳಿಗೆ 12 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದ್ದು, ಈ ಯೋಜನೆಗಳನ್ನು 2 ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ರಾಜ್ಯದಲ್ಲಿ 1900 ಕೋಟಿ ರೂ. ವಿನಿಯೋಗಿಸಿ 61 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದರು.
ರೈಲು ಅಪಘಾತ ತಪ್ಪಿಸಲು ‘ಕವಚ್’ ಎಂಬ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಯೋಜನೆಯಡಿ ರಾಜ್ಯಕ್ಕೆ 1632 ಕಿ.ಮೀ. ನೀಡಲಾಗಿದ್ದು, ಇದಕ್ಕೆ 1108 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. 10 ವಂದೇ ಭಾರತ್ ರೈಲುಗಳು ರಾಜ್ಯದಲ್ಲಿ ಸಂಚರಿಸುತ್ತಿದ್ದು, ವಂದೇ ಭಾರತ್ 12 ಜಿಲ್ಲೆಗಳಲ್ಲಿ ಸಂಪರ್ಕ ನೀಡಲಾಗಿದೆ. 10 ಸಾವಿರ ಸಾಮಾನ್ಯ ದರ್ಜೆ ಬೋಗಿ ತಯಾರಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಕೆ.ವಿವೇಕಾನಂದ, ಸಿ.ಎನ್. ಮಂಜೇಗೌಡ, ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಇದ್ದರು.