ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್, ಶಾಸಕರಾದ ಪಿ.ಇ ಪ್ರದೀಪ್ ಈಶ್ವರ್, ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಮತ್ತಿತರರು ಇದ್ದರು.  
ಜಿಲ್ಲೆ

‘ಕುಸುಮ’ದಿಂದ ನೀಗಲಿದೆ ವಿದ್ಯುತ್ ಸಮಸ್ಯೆ

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್, ಶಾಸಕರಾದ ಪಿ.ಇ ಪ್ರದೀಪ್ ಈಶ್ವರ್, ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಮತ್ತಿತರರು ಇದ್ದರು.

ಎನ್.ವೆಂಕಟೇಶ್

ಯೋಜನೆಗೆ ಒಟ್ಟೂ ಶೇ.80 ಸಹಾಯಧನ- ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಕುಸುಮ ಯೋಜನೆ ಅನುಷ್ಠಾನದಿಂದ ರೈತರ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಜತೆಗೆ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಕಳೆದ ವರ್ಷ ರಾಜ್ಯದಲ್ಲಿ ಬರಗಾಲ ಎದುರಾಗಿದ್ದರಿಂದ ಅನ್ಯರಾಜ್ಯಗಳಿಂದ ವಿದ್ಯುತ್ ಖರೀದಿಸಿ ಪೂರೈಸಬೇಕಾಯಿತು. ಉತ್ತರ ಪ್ರದೇಶ ಮತ್ತು ಪಂಜಾಬ್‌ನಿಂದ ಬೇಸಿಗೆಯಲ್ಲಿ ವಿದ್ಯುತ್ ಅನ್ನು ಸಾಲವಾಗಿ ಪಡೆದು, ನಂತರದ ದಿನಗಳಲ್ಲಿ ಮರು ಪೂರೈಸುವ ಒಪ್ಪಂದವಾಗಿತ್ತು. ಇದರಿಂದ ಸಂಕಷ್ಟವನ್ನು ಸರ್ಕಾರ ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು ಎಂದರು.
ಪ್ರಸ್ತುತ ಉತ್ತಮ ಮಳೆ ಹಾಗೂ ಸರ್ಕಾರ ಕೈಗೊಂಡ ಕೆಲವು ಮುನ್ನೆಚ್ಚರಿಕೆ ಕ್ರಮಗಳಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಹಾಗೆಯೇ ಬೇರೆ ರಾಜ್ಯಗಳಿಗೆ ಪೂರೈಸುವ ಸಾಮರ್ಥ್ಯ ಬಂದಿದೆ. ಈಗಾಗಲೇ ಒಪ್ಪಂದದಂತೆ ರಾಜ್ಯಗಳಿಗೆ ವಿದ್ಯುತ್ ಮರು ಪೂರೈಸಲಾಗುತ್ತಿದೆ. ಮುಂಬರುವ ದಿನಗಳಲ್ಲೂ ಜಲ, ಪವನ ಶಕ್ತಿ ಹಾಗೂ ಸೌರಶಕ್ತಿ ಸೇರಿ ಇತರ ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ಯುಕ್ತ ಕ್ರಮಗಳನ್ನು ಕೈಗೊಂಡಲ್ಲಿ ರಾಜ್ಯವು ವಿದ್ಯುತ್ ಉತ್ಪಾದನೆಯಲ್ಲಿ ಮೊದಲನೇ ಸ್ಥಾನಕ್ಕೆ ಬರಲಿದೆ ಎಂದು ಸಚಿವ ಜಾರ್ಜ್ ಸಂತಸ ವ್ಯಕ್ತಪಡಿಸಿದರು.

ಪರಿಣಾಮಕಾರಿ ಅನುಷ್ಠಾನಕ್ಕೆ ಸಹಾಯಧನ ಹೆಚ್ಚಳ
ರಾಜ್ಯಾದ್ಯಂತ ಕುಸುಮ ಸೌರ ವಿದ್ಯುತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಸಹಾಯಧನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ರಾಜ್ಯದಿಂದ ಶೇ.50ರಷ್ಟು ಹಣ ನೀಡಲು ಸಚಿವ ಸಂಪುಟದಲ್ಲಿ ತೀರ್ವಾನಿಸಲಾಗಿದೆ. ಇನ್ನೂ ಈ ಯೋಜನೆಗೆ ಕೇಂದ್ರ ಸರ್ಕಾರವು ಶೇ.30ರಷ್ಟು ಸಹಾಯಧನ ಒದಗಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಯೋಜನೆಯಡಿ ಶೇ.80ರಷ್ಟು ಸಹಾಯಧನ ರೈತರ ನೀರಾವರಿ ಉದ್ದೇಶಗಳಿಗೆ ಸಿಗಲಿದೆ ಎಂದು ಸಚಿವ ಜಾರ್ಜ್ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್, ಶಾಸಕರಾದ ಪಿ.ಇ ಪ್ರದೀಪ್ ಈಶ್ವರ್, ಕೆ.ಎಚ್.ಪುಟ್ಟಸ್ವಾಮಿ ಗೌಡ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕ.ವಿ.ಪ್ರ.ನಿ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುವಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ನಿರ್ದೇಶಕ ಎಚ್.ಜೆ. ರಮೇಶ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಮತ್ತಿತರರು ಇದ್ದರು.


ನೋಂದಣಿಗೆ ಮನವಿ
ಕುಸಮ ಯೋಜನೆ ಅನುಷ್ಠಾನಗೊಂಡಲ್ಲಿ ರೈತರ ವಿದ್ಯುತ್ ಬೇಡಿಕೆಯ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿವೆ. ಜತೆಗೆ ಮುಂಬರುವ ದಿನಗಳಲ್ಲಿ ರಾಜ್ಯ ವಿದ್ಯುತ್ ಕೊರತೆಯ ಸಂಕಷ್ಟಕ್ಕೆ ಸಿಲುಕದಂತೆ ಕಾಪಾಡಬಹುದಾಗಿದೆ. ಇದಕ್ಕೆ ರೈತರು ಆನ್‌ಲೈನ್ ಮೂಲಕ ಅರ್ಜಿ ಹಾಕಿ, ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಚಿವ ಕೆ.ಜೆ. ಜಾರ್ಜ್ ಮನವಿ ವಾಡಿದರು. ಕುಸುಮ ಸೌರ ವಿದ್ಯುತ್ ಯೋಜನೆಯಡಿ ನೋಂದಾಯಿತ ರೈತರಿಗೆ ಕೊಳವೆಬಾವಿ ಮತ್ತು ನೀರು ಇದ್ದಲ್ಲಿ ಸೌರ ವಿದ್ಯುತ್ ಪಂಪ್‌ಸೆಟ್ ಮತ್ತು ಪ್ಯಾನಲ್ ಬೋರ್ಡ್ ಸಹಿತ ಇತರ ಪರಿಕರಗಳನ್ನು ಸರ್ಕಾರವೇ ನೀಡಲಿದೆ ಎಂದರು.


ಹಾಳಾದ ಕಂಬಗಳ ತೆರವಿಗೆ ಸೂಚನೆ
ಜಿಲ್ಲೆಯಲ್ಲಿ ಕಬ್ಬಿಣದ ವಿದ್ಯುತ್ ಕಂಬ, ಹಾಳಾದ ವಿದ್ಯುತ್ ಕಂಬಗಳನ್ನು ತ್ವರಿತವಾಗಿ ತೆರವುಗೊಳಿಸಲು ಬೆಸ್ಕಾಂಗೆ ಸಭೆಯಲ್ಲಿ ಸೂಚಿಸಲಾಯಿತು. ನಿರ್ದಿಷ್ಟ ಕಂಬಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿಗೊಳಿಸಿ, ಬದಲಾವಣೆಯ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕು. ಒಂದು ವೇಳೆ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋದಲ್ಲಿ ಇಲ್ಲವೇ ದುರಸ್ತಿಗೆ ಬಂದಿದ್ದಲ್ಲಿ ನಗರ ಪ್ರದೇಶಗಳಲ್ಲಿ 24 ಗಂಟೆಗಳಲ್ಲಿ ಹಾಗೂ ಗ್ರಾವಾಂತರ ಪ್ರದೇಶಗಳಲ್ಲಿ 48 ಗಂಟೆಯೊಳಗೆ ಬದಲಾಯಿಸಬೇಕು. ಯಾವುದೇ ಕಾರಣಕ್ಕೂ ಇದಕ್ಕಿಂತಲೂ ಹೆಚ್ಚಿನ ಅವಧಿಯನ್ನು ವಿದ್ಯುತ್ ಪೂರೈಕೆ ಸಮಸ್ಯೆಗಳ ಪರಿಹಾರ ತೆಗೆದುಕೊಳ್ಳಬಾರದು ಎಂದು ಸಚಿವ ಕೆ.ಜೆ. ಜಾರ್ಜ್ ಸೂಚಿಸಿದರು.


ಉಪಕೇಂದ್ರ ಸ್ಥಾಪನೆಗೆ ಜಾಗ ಗುರುತಿಸಲು ಸೂಚನೆ
ಸ್ಥಳೀಯವಾಗಿ 45 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲು ಅಗತ್ಯವಿರುವ 2030 ಎಕರೆ ಜಾಗ ಗುರುತಿಸಲು ಸಚಿವ ಕೆ.ಜೆ. ಜಾರ್ಜ್ ಜಿಲ್ಲಾಡಳಿತಕ್ಕೆ ಸೂಚಿಸಿದರು. ಈಗಾಗಲೇ ಜಿಲ್ಲಾದ್ಯಂತ 871 ಎಕರೆ ಜಾಗವನ್ನು ಗುರುತಿಸಿದ್ದು, ಈ ಪೈಕಿ 240 ಎಕರೆ ಜಾಗ ಹಸ್ತಾಂತರಗೊಂಡಿದೆ. ಮೊದಲನೇ ಹಂತದಲ್ಲಿ 18 ಉಪಕೇಂದ್ರಗಳಿಂದ 137 ಮೆಗಾವ್ಯಾಟ್, 2ನೇ ಹಂತದಲ್ಲಿ 6 ಉಪಕೇಂದ್ರಗಳಿಂದ 37 ಮೆಗಾವ್ಯಾಟ್ ಸೇರಿ 174 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇದನ್ನು ಉಪಕೇಂದ್ರದಿಂದ 500 ಮೀಟರ್ ದೂರದಲ್ಲಿರುವ ಸ್ಥಳೀಯ ರೈತರ ಕೃಷಿ ಜಮೀನು, ಸರ್ಕಾರಿ ಶಾಲೆ, ಅಂಗನವಾಡಿ ಹಾಗೂ ಇತರ ಸರ್ಕಾರಿ ಕಚೇರಿಗಳಿಗೆ ಪೂರೈಸಲಾಗುತ್ತದೆ. ಉಳಿದ ವಿದ್ಯುತ್ ಅನ್ನು ಗ್ರಿಡ್‌ಗಳ ಮೂಲಕ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.


ಸಚಿವರಿಗೆ ಮನವಿ
ಜಿಲ್ಲೆಯಲ್ಲಿ ಇಂಧನ ಇಲಾಖೆಯ ವತ್ತ ಕಚೇರಿ, ಗೌರಿಬಿದನೂರಿನಲ್ಲಿ ವಿಭಾಗೀಯ ಕಚೇರಿ ಮತ್ತು 220 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ತೆರೆಯಲು ಸ್ಥಳೀಯ ಜನಪ್ರತಿನಿಧಿಗಳು ಸಚಿವರಿಗೆ ಮನವಿ ವಾಡಿದರು. ಮತ್ತೊಂದೆಡೆ ವಿದ್ಯುತ್ ಲೈನ್ ಅಳವಡಿಕೆಗೆ ಭೂ ಸ್ವಾಧೀನ, ಪರಿಹಾರ, ವಿದ್ಯುತ್ ವ್ಯತ್ಯಯ ಸೇರಿ ನಾನಾ ಸಮಸ್ಯೆಗಳನ್ನು ಬಗೆಹರಿಸಲು ರೈತರು ಮನವಿ ಪತ್ರ ಸಲ್ಲಿಸಿದರು.