ಹನೂರು : ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆದಿಂಬ, ಗೊಂಬೆಗಲ್ಲು ಹಾಗೂ ನೆಲ್ಲಿಕತ್ತರಿ ಗಿರಿಜನರ ಹಾಡಿಗಳಿಗೆ ಸದ್ಯದಲ್ಲಿಯೇ ವಿದ್ಯುತ್ ಸೌಕರ್ಯ ದೊರಕಲಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಹಾಡಿಗಳಿಗೆ ವಿದ್ಯುತ್ ಸೌಕರ್ಯ ದೊರಕಿಸಿ ಕೊಡುವ ಸಂಬಂಧ ಶುಕ್ರವಾರ ಮಾವತ್ತೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 80ಕ್ಕೂ ಹಾಡಿಗಳಲ್ಲಿ ಗಿರಿಜನರು ಹಲವು ದಶಕದಿಂದಲೂ ವಾಸಿಸುತ್ತಿದ್ದಾರೆ. ಆದರೆ ಇವರಿಗೆ ರಸ್ತೆ, ವಿದ್ಯುತ್ ಸೇರಿದಂತೆ ಇನ್ನು ಕೆಲವು ಮೂಲ ಸೌಕರ್ಯದ ಕೊರತೆ ಇದ್ದು, ಕಷ್ಟದ ನಡುವೆ ಜೀವನ ನಡೆಸುತ್ತಿದ್ದಾರೆ. ಈ ದೆಸೆಯಲ್ಲಿ ಜಿಲ್ಲೆಯಲ್ಲಿರುವ ಗಿರಿಜನರ ಕುಟುಂಬಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸಲು ಸರ್ಕಾರದಿಂದ 44 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಕೆಲವು ಹಾಡಿಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ಹಾಗೆಯೇ ಅರಣ್ಯ ಪ್ರದೇಶದ ನಡುವೆ ವಾಸಿಸುತ್ತಿರುವ ಕೆರೆದಿಂಬ, ಗೊಂಬೆಗಲ್ಲು ಹಾಗೂ ನೆಲ್ಲಿಕತ್ತರಿ ಹಾಡಿಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸುವ ಸಂಬಂಧ ಪರಿಶೀಲನೆ ನಡೆಸಲಾಗಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ಆದ್ದರಿಂದ ಈವರೆಗೂ ವಿದ್ಯುತ್ ಸೌಕರ್ಯವಿಲ್ಲದೇ ಸಮಸ್ಯೆಯನ್ನು ಎದುರಿಸುತ್ತಿದ್ದ ಗಿರಿಜನರು ಸೌಕರ್ಯವನ್ನು ಪಡೆಯಲಿದ್ದಾರೆ. ಈ ಗ್ರಾಮಗಳು ಅರಣ್ಯ ಪ್ರದೇಶದೊಳಗಿರುವುದರಿಂದ ವನ್ಯಜೀವಿ ಜೀವಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಭೂಮಿಯೊಳಗೆ (ಅಂಡರ್‌ಗ್ರೌಂಡ್) ಕೇಬಲ್ ಅಳವಡಿಸುವುದರ ಮೂಲಕ ವಿದ್ಯುತ್ ಸೌಕರ್ಯವನ್ನು ಕಲ್ಪಿಸಲಾಗುವುದು. ಕಾಮಗಾರಿಯ ಜವಾಬ್ದಾರಿ ಹೊತ್ತವರು ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜತೆಗೆ ಯಾವುದೇ ಸಮಸ್ಯೆಯಾಗದಂತೆ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕು. ಕಾಮಗಾರಿಯ ವೇಳೆ ಜಿಪಿಎಸ್ ಫೋಟೋದೊಂದಿಗೆ ನಿತ್ಯ ವರದಿ ಸಲ್ಲಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ: ಇದೇ ವೇಳೆ ಹಾಡಿಯ ಗಿರಿಜನರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಈ ವೇಳೆ ಪಿಡಿಒ ನಂಜುಡಸ್ವಾಮಿ ಅವರು ಪ್ರತಿಕ್ರಿಯಿಸಿ, ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಆದರೂ ಸ್ಥಳೀಯವಾಗಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು. 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನ, ಕೈಗೊಂಡ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಶಾಸಕರು ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು. ಜತೆಗೆ ತಾಲೂಕಿನಲ್ಲಿ ಗಿರಿಜನರ ಕುಟುಂಬಗಳಿಗೆ ಕಳಪೆ ಅಡುಗೆ ಎಣ್ಣೆ ವಿತರಣೆಯಾಗಿರುವುದರ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಅವರಿಗೆ ಸೂಚಿಸಿದರು.
ಇದೇ ವೇಳೆ ಗಿರಿಜನರು ಅರಣ್ಯ ಪ್ರದೇಶದೊಳಗಿರುವ ದೊಡ್ಡಸಂಪಿಗೆ ದೇಗುಲಕ್ಕೆ ತೆರಳಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದಿನ ಹಾಗೂ ಸಮಯವನ್ನು ನಿಗದಿಗೊಳಿಸಿ ದೇಗುಲಕ್ಕೆ ತೆರಳಲು ಅವಕಾಶ ಮಾಡಿಕೊಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸೆಸ್ಕ್ ಎಇಇ ರಂಗಸ್ವಾಮಿ, ಕೆಆರ್‌ಐಡಿಎಲ್ ಎಇ ಕಾರ್ತಿಕ್, ಗ್ರಾಪಂ ಸದಸ್ಯರಾದ ಮಾದೇವ, ಮಹದೇವಸ್ವಾಮಿ, ಮುಖಂಡರಾದ ಲಿಂಗೇಗೌಡ, ನಾಗೇಂದ್ರ, ಮಾದೇವ, ರಂಗ ಹಾಗೂ ಇನ್ನಿತರರು ಇದ್ದರು.