ಜಿಲ್ಲೆ

ದಶಕಗಳ ಹೋರಾಟ ಫಲಿಸುವ ನಿರೀಕ್ಷೆ : ಪಶ್ಚಿಮಘಟ್ಟದ ತಪ್ಪಲಿನ 28 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಸಿದ್ಧತೆ

ಸೌಮ್ಯ ಆರ್

ಮನೋಹರ್ ಬಳಂಜ ಬೆಳ್ತಂಗಡಿ

ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ದಟ್ಟ ಅಡವಿಯ ನಡುವೆ ಇರುವ ಸುಲ್ಕೇರಿ ಮೊಗ್ರು ಗ್ರಾಮದ ಪಂಜಾಲ, ಮಾಳಿಗೆಬೈಲಿನ 15 ಆದಿವಾಸಿ ಕುಟುಂಬ ಸೇರಿ ಒಟ್ಟು 28 ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಲು ಇದ್ದ ಅರಣ್ಯ ಇಲಾಖೆಯ ತೊಡಕು ನಿವಾರಣೆಯಾಗಿ ವಿದ್ಯುತ್ ಸಂಪರ್ಕ ಒದಗಿಸಲು ಅಂತಿಮ ಅನುಮೋದನೆ ನೀಡಿದೆ. ಸದ್ಯದಲ್ಲಿಯೇ ಈ ಪ್ರದೇಶದ ಜನರ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಸಿಗಲಿದ್ದು, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ವಾಸವಾಗಿರುವ ಜನರ ದಶಕಗಳ ಹೋರಾಟಕ್ಕೆ ಫಲ ಸಿಗುವ ಗಳಿಗೆ ಸನ್ನಿಹಿತವಾಗಿದೆ.

ಶತಮಾನಗಳಿಂದ ಅರಣ್ಯದಲ್ಲಿ ವಾಸಿಸುವ ಜನರು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದರು. ಸ್ವಾತಂತ್ರೃ ಸಿಕ್ಕಿ 78 ವರ್ಷವಾದರೂ ಅವರ ಬದುಕು ಕಗ್ಗತ್ತಲಿನಲ್ಲಿ ಕಳೆದು ಹೋಗಿತ್ತು. ಇಲ್ಲಿನ ಜನರು ವಿದ್ಯುತ್ ಸಂಪರ್ಕಕ್ಕಾಗಿ ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಮೂಲಸೌಲಭ್ಯಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದಾಗ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಖಾಸಗಿಯವರ ಮೂಲಕ ಅರ್ಜಿ ಸಲ್ಲಿಸಿದ್ದರು.

ಇಲ್ಲಿ 15 ಆದಿವಾಸಿ ಕುಟುಂಬಗಳು ಸೇರಿ 28 ಕುಟುಂಬಗಳು ವಾಸಿಸುತ್ತಿವೆ. 2016ರಲ್ಲಿ ಇವರು ಸರ್ಕಾರದ ಸೂಚನೆಯಂತೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಶೇಖರ ಕುಕ್ಕೇಡಿ ನೇತೃತ್ವದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಈ ಜನರು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದರು. ದೆಹಲಿ, ಬೆಂಗಳೂರು ಎಂದು ಓಡಾಟ ನಡೆಸಿ ಕೊನೆಗೂ 2019ರಲ್ಲಿ ನ್ಯಾಷನಲ್ ವೈಲ್ಡ್‌ಲೈಫ್ ಬೋರ್ಡ್ ಈ ಕಾಮಗಾರಿ ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಎಲ್ಲ ಅನುಮತಿಗಳೂ ಲಭಿಸಿದೆ ಅನ್ನುವಾಗ ಹೊಸ ತಡೆಯೊಂದು ಎದುರಾಗಿತ್ತು. ರಾಜ್ಯ ಅರಣ್ಯ ಇಲಾಖೆಯಿಂದ ಮತ್ತೆ ಅನುಮೋದನೆ ಪಡೆಯಬೇಕು ಎಂಬ ಕಾನೂನಿನಿಂದಾಗಿ ಇವರಿಗೆ ವಿದ್ಯುತ್ ಸಂಪರ್ಕ ಸಿಗಲೇ ಇಲ್ಲ. 2019ರಿಂದ ಅರಣ್ಯ ಇಲಾಖೆಯಲ್ಲಿ ಉಳಿದುಕೊಂಡಿದ್ದ ಕಡತಕ್ಕೆ ಕೊನೆಗೂ ಇದೀಗ ಇಲಾಖೆಯ ಅಂತಿಮ ಅನುಮೋದನೆ ಸಿಕ್ಕಿದಂತಾಗಿದ್ದು ಇವರಿಗೆ ವಿದ್ಯುತ್ ಸಂಪರ್ಕ ಲಭಿಸುವ ಭರವಸೆ ಮೂಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜ.27ರಂದು ಆದಿವಾಸಿಗಳು ನೆಲೆಸಿರುವ ಅರಣ್ಯ ಪ್ರದೇಶದ ವಸತಿ ಪ್ರದೇಶಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿ, ವಿದ್ಯುತ್ ಮಾರ್ಗ ಅಳವಡಿಕೆಗೆ ಅರಣ್ಯ ಭೂಮಿ ಪರಿವರ್ತನೆಗಾಗಿ ಪೋರ್ಟಲ್‌ನಲ್ಲಿ ಅರ್ಜಿ ಹಾಕಿಸಿ, ಅನುಮತಿ ಪಡೆಯಲು ಕ್ರಮ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರು.

48 ಲಕ್ಷ ರೂ. ಅಂದಾಜು ಪಟ್ಟಿ

ಮೆಸ್ಕಾಂ ಇಲಾಖೆ 28 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 48 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿದ್ದು, ರಾಷ್ಟ್ರೀಯ ಉದ್ಯಾನದೊಳಗೆ 647ಮೀಟರ್ ಎಬಿ ಕೇಬಲ್ ಮೂಲಕ ವಿದ್ಯುತ್ ಲೈನ್ ಹಾದುಹೋಗಲಿದೆ. ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆಯಿದೆ.

ಅನೇಕ ವರ್ಷಗಳಿಂದ ವಿದ್ಯುತ್ ಸಂಪರ್ಕ ಪಡೆಯಲು ನಿರಂತರ ಪ್ರಯತ್ನ ನಡೆಸುತ್ತಾ ಬಂದಿದ್ದೇವೆ. ಅರಣ್ಯ ಇಲಾಖೆಯ ಅಡ್ಡಿಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಇದೀಗ ಅರಣ್ಯ ಇಲಾಖೆಯ ಅನುಮತಿ ದೊರೆತಿದ್ದು ನಮ್ಮ ಪಾಲಿಗೆ ಬಹಳ ಸಂತಸ ತಂದಿದೆ. ವೆಂಕಪ್ಪ ಮಲೆಕುಡಿಯ ಅರಣ್ಯ ತಪ್ಪಲಿನ ನಿವಾಸಿ ಕೇಂದ್ರ ಪರಿಸರ ಇಲಾಖೆಯ ಅನುಮತಿ ಸಿಕ್ಕಿದ್ದರೂ ರಾಜ್ಯ ಅರಣ್ಯ ಇಲಾಖೆಯ ಅನುಮತಿ ಇಲ್ಲದ ಕಾರಣ ವಿದ್ಯುತ್ ಸಂಪರ್ಕ ಲಭಿಸಿರಲಿಲ್ಲ. ಮುಖ್ಯಮಂತ್ರಿ, ಅರಣ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಪ್ರಯತ್ನದಿಂದ ಅರಣ್ಯ ಇಲಾಖೆಯ ಅನುಮೋದನೆಯೂ ದೊರೆತಿದ್ದು ಬಹುದಿನಗಳ ಬೇಡಿಕೆಯೊಂದು ಈಡೇರಿದಂತಾಗಿದೆ. ಸತೀಶ್ ಎಸ್.ಎಂ. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುದೀರ್ಘ ಹೋರಾಟಕ್ಕೆ ಸಿಕ್ಕ ಗೆಲುವು ಇದು. ತಾಲೂಕಿನಲ್ಲಿ ಇನ್ನೂ ಇದೇ ರೀತಿ ವಿದ್ಯುತ್ ವಂಚಿತರಾಗಿರುವ ಪ್ರದೇಶಗಳಿವೆ. ಅಲ್ಲಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಶೇಖರ ಕುಕ್ಕೇಡಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ https://www.vijayavani.net/yuvavahini-program-3 https://www.vijayavani.net/guddalipoje