ಜಿಲ್ಲೆ

ವಿದ್ಯುತ್ ಕಾಮಗಾರಿ: ಅಧಿಕಾರಿ, ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಯುವಕ ಬಲಿ


ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ಕಾಟಿನಕಲ್ಲು ಗ್ರಾಮದಲ್ಲಿ ಯುವಕ ಕರೆಂಟ್ ಶಾಕ್ ಗೆ ಬಲಿಯಾಗಿದ್ದಾನೆ. ಈತ ವಿದ್ಯುತ್ ಗುತ್ತಿಗೆದಾರನೊಂದಿಗೆ ಕೆಲಸಕ್ಕೆ ತೆರಳಿದ್ದಾಗ ದುರ್ಘಟನೆ ನಡೆದಿದೆ.
ನಾಮಗೊಂಡ್ಲು ಗ್ರಾಮದ ಅಗಸರಪೇಟೆಯ ಶ್ರೀರಾಮಪ್ಪ ಎಂಬುವರ ಪುತ್ರ ಎನ್.ಎಸ್.ಅಭಿಲಾಷ್(21) ಮೃತ ಯುವಕ. ಪದವಿ ಮುಗಿಸಿದ್ದ ಅಭಿಲಾಷ್ ಬಿಡುವಿನ ವೇಳೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ.  ವಿದ್ಯುತ್ ಗುತ್ತಿಗೆದಾರ ಸೀತಾರಾಂ ಕಾಟಿನಕಲ್ಲು ಬಳಿ 11 ಕೆ.ವಿ ವಿದ್ಯುತ್ ಸಂಪರ್ಕದ ಕೆಲಸಕ್ಕೆಂದು ಅಭಿಲಾಷ್ ನನ್ನು ಕರೆದೊಯ್ದಿದ್ದ. ಕೆಲಸ ಮಾಡುತ್ತಿದ್ದ ಮಾರ್ಗದಲ್ಲಿ ಸಂಜೆ 4 ರ ಸಮಯದಲ್ಲಿ ದಿಢೀರ್ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದರಿಂದ ವಿದ್ಯುತ್ ಶಾಕ್ ಹೊಡೆದು ಅಭಿಲಾಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

*ಗ್ರಾಮಸ್ಥರ ಪ್ರತಿಭಟನೆ*
ಬೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳದಲ್ಲಿದ್ದುಕೊಂಡು ಹಾಗೂ ಎಲ್.ಸಿ ತೆಗೆದುಕೊಂಡಿರುವುದನ್ನು ಖಚಿತಪಡಿಸಿಕೊಂಡು ಸುರಕ್ಷತಾ ಕ್ರಮಗಳೊಂದಿಗೆ ವಿದ್ಯುತ್ ಕೆಲಸಗಳನ್ನು ಮಾಡಬೇಕು. ಆದರೆ, ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಿ ತೆಗೆದುಕೊಳ್ಳದೆ ಕೆಲಸ ಮಾಡುತ್ತಿರುವುದರಿಂದ ಪದೇ ಪದೆ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂಬ ಆಕ್ರೋಶ ವ್ಯಕ್ತವಾಗಿದೆ.‌ 
ದುರ್ಘಟನೆ ಹಿನ್ನೆಲೆಯಲ್ಲಿ ಪ್ರತಿಭಟಿಸಿದ ಗ್ರಾಮಸ್ಥರು,
ಅಭಿಲಾಷ್ ಸಾವಿಗೆ ಬೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ನೇರ ಹೊಣೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.