ಬೇಲೂರು: ಅಧುನಿಕ ಕಾಲ ಘಟ್ಟದಲ್ಲಿ ವಿದ್ಯುತ್ ಉಪಕರಣ ರಿಪೇರಿದಾರರಿಗೆ ಹಲವು ಸವಾಲುಗಳನ್ನು ಎದುರಿಸಲು ಅಗತ್ಯ ಕಾರ್ಯಾಗಾರ ಹಾಗೂ ಅಧ್ಯಯನ ಅಗತ್ಯವಿದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.
ಪಟ್ಟಣದ ಕೆಂಪೇಗೌಡ ರಸ್ತೆಯ ವಿಷ್ಣು ರೆಜೆನ್ಸಿ ಸಭಾಂಗಣದಲ್ಲಿ ತಾಲೂಕು ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಕಾರ್ಮಿಕರ ಸಂಘದಿಂದ ಭಾನುವಾರ ಆಯೋಜಿಸಿದ್ದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಎರಡು ದಶಕಗಳ ಹಿಂದೆ ರಿಪೇರಿದಾರರಿಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಇತ್ತು. ಆದರೆ ತಂತ್ರಜ್ಞಾನ ಬೆಳೆದಂತೆ ವಿದೇಶಿ ಎಲೆಕ್ಟ್ರಾನಿಕ್ ವಸ್ತುಗಳು ಮಾರುಕಟ್ಟೆಗೆ ಬರುತ್ತಿರುವುದರಿಂದ ಸ್ಥಳೀಯ ರಿಪೇರಿದಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇಂತಹ ಸಂದರ್ಭ ವಿದ್ಯುತ್ ಉಪಕರಣ ರಿಪೇರಿದಾರರು ಧೃತಿಗೇಡದೆ ಕೆಲಸ ಮಾಡಬೇಕು. ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ಕೆಲಸ ಮುಂದುವರೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ ಇಲ್ಲಿಯೂ ಬಡವರಿದ್ದು ಅವರನ್ನು ಗುರುತಿಸಿ ಪುರಸಭೆಯಿಂದ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ರಿಪೇರಿದಾರರ ಸಂಘದಿಂದ ಸಿಎ ನಿವೇಶನಕ್ಕೆ ಮನವಿ ಕೊಟ್ಟಲ್ಲಿ ಆದ್ಯತೆ ಮೇಲೆ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದರು.
ವಿದ್ಯುತ್ ರಿಪೇರಿದಾರರ ಸಂಘದ ಜಿಲ್ಲಾಧ್ಯಕ್ಷ ಪವನ್ ಕುಮಾರ್ ಮಾತನಾಡಿ, ವಿದ್ಯುತ್ ಉಪಕರಣಗಳ ರಿಪೇರಿದಾರರಿಗೆ ಹತ್ತಾರು ಸವಾಲುಗಳಿವೆ. ಇಂತಹ ಸವಾಲುಗಳ ನಡುವೆ ಬೇಲೂರು ಹೊಯ್ಸಳ ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿದಾರರ ಸಂಘ ಮುನ್ನಡೆಯುತ್ತಿರುವುದು ಶ್ಳಾಘನೀಯ. ಜತೆಗೆ ಇಲ್ಲಿನ ಸಂಘದಲ್ಲಿ ಹಣ ಹೂಡಿಕೆ ಮತ್ತು ಠೇವಣಿ ಹಾಗೂ ಅಧ್ಯಯನ ಪ್ರವಾಸ ನಡೆಸಿದ ಕೀರ್ತಿ ಬೇಲೂರು ಸಂಘಕ್ಕೆ ಸಲ್ಲುತ್ತದೆ. ಮುಂದಿನ ದಿನದಲ್ಲಿ ಜಿಲ್ಲೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪುರಸಭೆ ಸದಸ್ಯ ಬಿ.ಸಿ.ಜಗದೀಶ್, ಮಾತನಾಡಿ. ಪುರಸಭಾ ಸದಸ್ಯರಾದ ಬಳಿಕ ನಾವು ಅಧ್ಯಯನ ಪ್ರವಾಸ ಮಾಡಬೇಕು ಎಂದಿದ್ದೆವು. ಆದರೆ ಅದು ಸಾದ್ಯವಾಗಲಿಲ್ಲ. ಆದರೆ ಸಣ್ಣ ಸಂಘಟನೆ ಇಂದು ಅಧ್ಯಯನ ಪ್ರವಾಸ ಮಾಡಿರುವುದು ನಿಜಕ್ಕೂ ಅತ್ಯುತ್ತಮ ಬೆಳವಣಿಗೆ ಎಂದರು.
ಹೊಯ್ಸಳ ವಿದ್ಯುತ್ ಉಪಕರಣಗಳ ರೀಪೇರಿದಾರರ ಕಾರ್ಮಿಕರ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಎರಡು ವರ್ಷದಿಂದ ಸಂಘದಲ್ಲಿ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸರ್ವ ಸದಸ್ಯರು ಸಹಕಾರದಿಂದ ಸಂಘ ಮುನ್ನಡೆಯುತ್ತಿದೆ. ವಿಶೇಷವಾಗಿ ಅಧುನಿಕ ಕಾಲಘಟ್ಟಕ್ಕೆ ಹೊಂದಿಕೊಳ್ಳಲು ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ಆರೋಗ್ಯ ವಿಮೆ, ತರಬೇತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗುವುದು ಎಂದರು.
ಉಪಾಧ್ಯಕ್ಷ ಬಾಬುರಾವ್, ಪ್ರಧಾನ ಕಾಯದರ್ಶಿ ಸಮೀರ್, ಖಜಾಂಚಿ ಸುಬ್ರಹ್ಮಣ್ಯ, ಸಂಚಾಲಕ ಅನಿಲ್ ಕುಮಾರ್, ಶಶಿಧರ್, ವೇಣು, ಶ್ರೀಹರಿ, ಸುಧೀಂದ್ರ, ರಜಿನಿ, ಮಧು ಮಾಲತಿ ಇತರರಿದ್ದರು.