ಜಿಲ್ಲೆ

ವಿದ್ಯುತ್ ಉಚಿತವೆಂದಿದ್ದಕ್ಕೆ ಕಾಂಗ್ರೆಸ್‌ಗೆ ವೋಟ್ ಹಾಕ್ದೆ: ಸೆಸ್ಕ್ ಸಿಬ್ಬಂದಿಗೆ ಎಲೆಚಾಕನಹಳ್ಳಿ ರೈತನ ಟಾಂಗ್

ಕೆ.ಎನ್.ರಾಘವೇಂದ್ರ

ಮಂಡ್ಯ: ವಿಧಾನಸಭಾ ಚುನಾವಣೆ ಮತಯಾಚನೆ ಸಂದರ್ಭದಲ್ಲಿ 200 ಯೂನಿಟ್ ವಿದ್ಯುತ್ ಉಚಿತವೆಂದು ಸಿದ್ದರಾಮಯ್ಯ ಹೇಳಿದ್ದರು. ಅದಕ್ಕೆ ನಾನು ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ. ಆದ್ದರಿಂದ ವಿದ್ಯುತ್ ಬಿಲ್ ಕಟ್ಟುವುದಿಲ್ಲ.

ಇದು ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಬಿಲ್ ಕಟ್ಟುವಂತೆ ಸೆಸ್ಕ್ ಸಿಬ್ಬಂದಿ ಕೇಳಿದ್ದಕ್ಕೆ ರೈತರೊಬ್ಬರು ನೀಡಿದ ಉತ್ತರ. ಕರೆಂಟ್ ಬಿಲ್ ಕೊಡಲ್ಲ. ಯಾಕೆ ಕೊಡಬೇಕು. ಸಿದ್ದರಾಮಯ್ಯ ಹೇಳಿಲ್ವಾ, ನಿಂಗೂ ಫ್ರೀ ನಂಗೂ ಫ್ರೀ ಎಂದು. ಆದ್ದರಿಂದ ನಾವು ಬಿಲ್ ಕಟ್ಟಲ್ಲ. 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ವಜಾ ಮಾಡುತ್ತಾರೆಂದೇ ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ. ಸಿದ್ದರಾಮಯ್ಯನೇ ಕಟ್ಟಲ್ಲ ಫ್ರೀ ಎಂದು ಮೇಲೆ ನಾನು ಕಟ್ಟಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯಗಿಂತ ನಾನು ಶ್ರೀಮಂತ ಅಲ್ಲ, ಆದ್ದರಿಂದ ನಾನು ಕಟ್ಟಲ್ಲ ಅಷ್ಟೇ. ಅದೇನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ. ಸಂಪರ್ಕ ಕಿತ್ತಾಕುತ್ತೀರಾ, ಕಿತಾಕಿ ನೋಡುತ್ತೇನೆ. ನಿಮಗೆ ತಾಕತ್ ಇದ್ದರೆ ಕಂಬಕ್ಕೆ ಹತ್ತಿ ಕಿತ್ತಾಕಿ ನೋಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಬಿಲ್ ಕಟ್ಟಲ್ಲ. ಯಾರನ್ನ ಕರೆದುಕೊಂಡು ಬರ್ತೀರಾ ಕರೆದುಕೊಂಡು ಬನ್ನಿ. ಕರೆಂಟ್ ಬಿಲ್ಲೂ ಕಟ್ಟಲ್ಲ, ಬಸ್‌ನಲ್ಲಿ ನಮ್ಮ ಹೆಂಗಸರಿಗೆ ಟಿಕೆಟ್ ತೆಗೆದುಕೊಳ್ಳುವುದಿಲ್ಲ. ಸರ್ಕಾರ ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ ಕೊಡಲಿ ಇಲ್ಲ ಬಿಡಲಿ. ಮಾತಿನಂತೆ ಉಳಿಸಿಕೊಳ್ಳಲ್ಲ ಎಂದರೆ ಸಿಎಂ ಕುರ್ಚಿ ಮೇಲೆ ಕೂರಲ್ಲವೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದರಂತೆ ವಿದ್ಯುತ್ ಬಿಲ್ ಕಟ್ಟಬೇಕು ಎಂದರೆ ಸಿದ್ದರಾಮಯ್ಯ ಒಂದು ಸೆಕೆಂಡ್ ಸಿಎಂ ಕುರ್ಚಿ ಮೇಲೆ ಕೂರಬಾರದು. ಸಿದ್ದರಾಮಯ್ಯ ರಾಜೀನಾಮೆ ಕೊಡಲಿ. ವೋಟ್ ಹಾಕಿಸಿಕೊಳ್ಳುವಾಗ ಒಂದು ಹೇಳಿಕೆ ಕೊಡೋದು. ಗೆದ್ದ ಮೇಲೆ ಬೇರೆ ಹೇಳಿಕೆ ಕೊಡೋದಾ ಎಂದು ಆಕ್ರೋಶ ಹೊರಹಾಕಿದ್ದಾರೆ.