ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ಟೌನ್‌ನ ಕ್ರೀಡಾಂಗಣದ ತಡೆಗೋಡೆಗೆ ಹೊಂದಿಕೊಂಡಂತಿರುವ ವಿದ್ಯುತ್ ಕಂಬದಲ್ಲಿ ತಂತಿಗಳು ಜೋತು ಬಿದ್ದಿದ್ದು, ಕ್ರೀಡಾಪಟುಗಳಿಗೆ ಭೀತಿ ಎದುರಾಗಿದೆ.
ಕ್ರೀಡಾಂಗಣದಲ್ಲಿನ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವ್ಯಾಯಾಮ ಶಾಲೆ ಸಮೀಪದಲ್ಲಿನ ಕಂಬದಲ್ಲಿ ನೆಲಕ್ಕೆ ತಾಕುವಂತೆ ವಿದ್ಯುತ್ ತಂತಿ ಕಂಡುಬರುತ್ತಿದ್ದು, ಇಂಥ ಆತಂಕಕ್ಕೆ ಕಾರಣವಾಗಿದೆ.
ಕ್ರೀಡಾಂಗಣದ ತಡೆಗೋಡೆ ಹೊರಭಾಗದಲ್ಲಿ ಖಾಸಗಿ ಶೆಡ್ ನಿರ್ಮಾಣವಾಗುತ್ತಿದ್ದು, ಶೆಡ್‌ಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿ ಎನ್ನಲಾಗಿದ್ದು, ಕ್ರೀಡಾಪಟುಗಳು ಸಾಮಾನ್ಯವಾಗಿ ವಿಶ್ರಮಿಸಲು ತಡೆಗೋಡೆ ಬಳಿ ಬರುತ್ತಾರೆ. ನೆಲಕ್ಕೆ ತಾಕುವಂತಿರುವ ವಿದ್ಯುತ್ ತಂತಿ ಅವಘಡಕ್ಕೆ ಆಸ್ಪದ ನೀಡಬಹುದು ಎಂಬುದು ಸ್ಥಳೀಯರ ಆತಂಕವಾಗಿದೆ. ಜಿಲ್ಲಾಮಟ್ಟದ ಕ್ರೀಡೆಗಳು ಸೇರಿ ಜಿಲ್ಲಾಮಟ್ಟದ ಕಾರ್ಯಕ್ರಮಗಳು ನಡೆಯುವ ಕ್ರೀಡಾಂಗಣದಲ್ಲಿ ಇಂಥ ಅಪಾಯ ಎದುರಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸುತ್ತಿಲ್ಲ. ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ರೆಂಬೆಗಳೂ ತಾಕುತ್ತಿವೆ! ಇದೇ ವಿದ್ಯುತ್ ಕಂಬಕ್ಕೆ ಅಲ್ಲಿನ ಮರದ ರೆಂಬೆಗಳು ತಾಕುವಂತಿವೆ. ರೆಂಬೆಗಳನ್ನು ಶೀಘ್ರದಲ್ಲೇ ತೆರವು ಮಾಡಬೇಕು ಇಲ್ಲವಾದರೆ ಶಾರ್ಟ್ ಸರ್ಕ್ಯೂಟ್ ಸಂಭವಿಸಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.