ಜಿಲ್ಲೆ

ಎಲೆಕ್ಟ್ರಿಕ್ ವಾಹನದತ್ತ ಜನರ ಚಿತ್ತ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನ ಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿಗೆ ಹೊಂದಾಣಿಕೆ ಆಗಲಿಕ್ಕಿಲ್ಲ ಎಂದೇ ನಂಬಲಾಗಿದ್ದ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಜಿಲ್ಲೆಯಲ್ಲಿ ನಿಧಾನಕ್ಕೆ ಆಸಕ್ತಿ ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿ ರಸ್ತೆಗೆ ಇಳಿಯುತ್ತಿರುವ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವುದೇ ಇದಕ್ಕೆ ಸಾಕ್ಷಿ. ಜೂನ್‌ನಿಂದ ಈಚೆಗೆ ಸರ್ಕಾರ ಸಬ್ಸಿಡಿ ಕಡಿತಗೊಳಿಸಿ, ಪ್ರೋತ್ಸಾಹಧನ ಕಡಿಮೆ ಮಾಡಿದ ಕಾರಣ ಈ ಬಗೆಯ ವಾಹನಗಳ ಬೆಲೆಯಲ್ಲಿ ಹೆಚ್ಚಳವಾದರೂ ಜನರ ಖರೀದಿ ಆಸಕ್ತಿ ಮಾತ್ರ ಹಿಂದಿನಂತೆಯೇ ಮುಂದುವರಿದಿದೆ.
ಪೆಟ್ರೋಲ್, ಡೀಸೆಲ್ ಸೇರಿದಂತೆ ಪಳೆಯುಳಿಕೆ ಇಂಧನಗಳ ಬೆಲೆ ಹೆಚ್ಚಳ ಜನಸಾಮಾನ್ಯರಿಗೆ ಹೊರೆ ಆಗುತ್ತಿರುವ ಸಂದರ್ಭದಲ್ಲಿ ಭವಿಷ್ಯದ ಸಾರಿಗೆ ಎಂದೇ ಬಿಂಬಿತವಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳು ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿವೆ. ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆ, ಕೆಲವು ದ್ವಿಚಕ್ರ ವಾಹನಗಳಲ್ಲಿ ವರದಿಯಾದ ಬೆಂಕಿ ಆಕಸ್ಮಿಕಗಳು ಸೇರಿದಂತೆ ಕೆಲವೊಂದು ನ್ಯೂನತೆಗಳು, ಇತ್ತೀಚೆಗೆ ಈ ಬಗೆಯ ವಾಹನಗಳಿಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡ ಪ್ರತಿಕೂಲ ನಿರ್ಧಾರಗಳ ಋಣಾತ್ಮಕ ಅಂಶಗಳ ಮಧ್ಯೆಯೂ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಕೊಡಗಿನಲ್ಲೂ ಆಸಕ್ತಿ ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಏರುತ್ತಾ ಸಾಗಿದೆ.
ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಹೈಬ್ರಿಡ್ ಮತ್ತು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಮತ್ತು ಮಾರಾಟ ತೀವ್ರಗೊಳಿಸುವ ಸಬ್ಸಿಡಿ ಯೋಜನೆ (ಫೇಮ್-೨) ರೂಪಿಸಿತ್ತು. ಮೂರು ವರ್ಷಗಳಿಗೆಂದು ೨೦೧೯ರಲ್ಲಿ ಆರಂಭಿಸಲಾಗಿದ್ದ ಫೇಮ್-೨ ಯೋಜನೆಯನ್ನು ೨೦೨೧ರಲ್ಲಿ ಮತ್ತೆ ಎರಡು ವರ್ಷಕ್ಕೆ ವಿಸ್ತರಿಸಲಾಗಿತ್ತು. ಈ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಇದ್ದ ಸಬ್ಸಿಡಿಯನ್ನು ಜೂನ್‌ನಿಂದ ಕಡಿತಗೊಳಿಸಲಾಗಿದೆ. ಮೊದಲು ಪ್ರತಿ ಕಿಲೋ ವ್ಯಾಟ್‌ಗೆ ೧೫ ಸಾವಿರ ರೂ. ಸಬ್ಸಿಡಿ ಕೊಡಲಾಗುತ್ತಿತ್ತು. ಜೂನ್ ತಿಂಗಳಿನಲ್ಲಿ ೫ ಸಾವಿರ ರೂ. ಕಡಿತ ಮಾಡಲಾಗಿದ್ದು, ೧೦ ಸಾವಿರ ರೂ. ಸಬ್ಸಿಡಿ ಕೊಡಲಾಗುತ್ತಿದೆ.
ಇದಲ್ಲದೇ, ಇ-ದ್ವಿಚಕ್ರ ವಾಹನಗಳ ಖರೀದಿಗೆ ಕೊಡಲಾಗುತ್ತಿದ್ದ ಪ್ರೊತ್ಸಾಹ ಧನವನ್ನೂ ಸರ್ಕಾರ ಶೇ. ೧೫ಕ್ಕೆ ಇಳಿಸಿದೆ. ಮೊದಲು ಶೇ. ೪೦ರಷ್ಟು ಪ್ರೋತ್ಸಾಹಧನ ಕೊಡಲಾಗುತ್ತಿತ್ತು. ಇದು ಕೂಡ ಎಲೆಕ್ಟ್ರಿಕ್ ವಾಹನಗಳ ದರ ಹೆಚ್ಚಳಕ್ಕೆ ಕೊಡುಗೆ ನೀಡಿದೆ. ಇಷ್ಟಾಗಿಯೂ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಕಡಿಮೆ ಆಗಿಲ್ಲ.
ಕೊಡಗಿನಲ್ಲಿ ಈ ವರ್ಷದ ಜನವರಿಯಲ್ಲಿ ೨೩ ಎಲೆಕ್ಟ್ರಿಕ್ ವಾಹನಗಳು ನೋಂದಣಿ ಆಗಿದೆ. ಫೆಬ್ರವರಿಯಲ್ಲಿ ೨೬, ಮಾರ್ಚ್‌ನಲ್ಲಿ ೨೮, ಏಪ್ರಿಲ್‌ನಲ್ಲಿ ೧೯ ಹಾಗೂ ಮೇ ತಿಂಗಳಿನಲ್ಲಿ ೪೭ ಎಲೆಕ್ಟ್ರಿಕ್ ವಾಹನಗಳು ನೋಂದಣಿ ಆಗಿದೆ. ಸರ್ಕಾರ ಸಬ್ಸಿಡಿ ಕಡಿತಗೊಳಿಸಿ, ಪ್ರೋತ್ಸಾಹಧನ ಕಡಿಮೆ ಮಾಡಿದ ನಂತರ ಜೂನ್‌ನಲ್ಲಿ ೧೮ ವಾಹನಗಳು ನೋಂದಣಿ ಆಗಿದ್ದರೆ, ಜುಲೈನಲ್ಲಿ ೧೮ ಹಾಗೂ ಆಗಸ್ಟ್‌ನಲ್ಲಿ ಇಲ್ಲಿಯ ತನಕ ೨೪ ಸೇರಿದಂತೆ ೨೦೨೩ರಲ್ಲಿ ಒಟ್ಟು ೨೦೩ ಎಲೆಕ್ಟ್ರಿಕ್ ವಾಹನಗಳು ಮಡಿಕೇರಿ ಆರ್‌ಟಿಒದಲ್ಲಿ ನೋಂದಣಿ ಆಗಿದೆ.
ಈಗಿನ ತಲೆಮಾರು ಬಯಸುವ ವೇಗ, ವಿಭಿನ್ನ ಶೈಲಿಗಳನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಅಳವಡಿಕೆ ಆಗುತ್ತಿರುವುದರಿಂದ ಬೆಲೆ ಹೆಚ್ಚಳ ಅಷ್ಟೊಂದು ಪರಿಣಾಮ ಬೀರುತ್ತಿಲ್ಲ. ಇದರ ಜತೆಗೆ ಇವಿ ವಾಹನ ವೆಚ್ಚದಲ್ಲಿ ಬಳಕೆದಾದರಿಗೆ ವಿವಿಧ ರೀತಿಯ ನೇರ ರಿಯಾಯಿತಿ, ಕೂಪನ್ ಮೂಲಕ ನಿರ್ದಿಷ್ಟ ಮೊತ್ತವನ್ನು ನಂತರ ಮರುಪಾವತಿ ಮಾಡುವ ಹಣಕಾಸಿನ ಪ್ರೋತ್ಸಾಹ, ವಾಹನಕ್ಕೆ ಸಾಲ ಪಡೆಯುವ ವೇಳೆ ಬಡ್ಡಿ ದರದಲ್ಲಿ ರಿಯಾಯಿತಿ, ವಾಹನ ಖರೀದಿ ಸಮಯದಲ್ಲಿ ರಸ್ತೆ ತೆರಿಗೆ ಮನ್ನಾ, ಹೊಸ ಇವಿ ವಾಹನ ಖರೀದಿ ವೇಳೆ ನೋಂದಣಿ ಶುಲ್ಕದಲ್ಲಿ ರಿಯಾಯಿತಿ ಬಡ್ಡಿ ರಹಿತ ಸಾಲಗಳು, ಟಾಪ್‌ಅಪ್ ಸಬ್ಸಿಡಿಗಳು ಕೂಡ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಗ್ರಾಹಕರನ್ನು ಸೆಳೆಯುತ್ತಿದೆ.
ಜನಸಾಮಾನ್ಯರಲ್ಲಿ ಇತ್ತೀಚೆಗೆ ಹೆಚ್ಚು ಜಾಗೃತಗೊಳ್ಳುತ್ತಿರುವ ಪರಿಸರ ಪ್ರಜ್ಞೆ ಮಾತ್ರವಲ್ಲದೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿನ ಸತತ ಏರಿಕೆಯೂ ಎಲೆಕ್ಟ್ರಿಕ್ ವಾಹನಗಳ ಕಡೆಗೆ ವಾಲುವಂತೆ ಮಾಡುತ್ತಿದೆ. ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಬಳಸುವ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ದರ ಅಧಿಕ ಎನ್ನುವುದನ್ನು ಹೊರತುಪಡಿಸಿದರೆ ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ’ಇ ವಾಹನ’ ಸಾಮರ್ಥ್ಯ ಸಾಂಪ್ರದಾಯಿಕ ವಾಹನಗಳಷ್ಟೇ ಇದೆ. ನಿರ್ವಹಣಾ ವೆಚ್ಚವೂ ಕಡಿಮೆ. ಮಿತವ್ಯಯದ ಸಂಚಾರ ಸಾಧ್ಯ. ದೇಶಕ್ಕೆ ಕೊಡುಗೆ ನೀಡಿದ ಸಾರ್ಥ್ಯಕ್ಯವೂ ಇರುತ್ತದೆ ಎನ್ನುವುದು ಎಲೆಕ್ಟ್ರಿಕ್ ವಾಹನ ಬಳಕೆದಾರರ ಮಾತು.
ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆ, ಶಕ್ತಿ ಮತ್ತು ರೇಂಜ್‌ನ ಋಣಾತ್ಮಕ ಅಂಶಗಳು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಹೋಗುವವರನ್ನು ಒಂದು ಕ್ಷಣ ಯೋಚಿಸುವಂತೆ ಮಾಡಿದರೂ ಪರಿಸರ ಸ್ನೇಹಿ, ಮನೆಯಲ್ಲೇ ಚಾರ್ಜ್ ಮಾಡಿಕೊಳ್ಳಬಹುದಾದ ಅನುಕೂಲಕತೆ, ಕಡಿಮೆ ನಿರ್ವಹಣಾ ವೆಚ್ಚ, ಕನಿಷ್ಠ ಮಾಲಿನ್ಯ ಪ್ರಮಾಣ, ಪರಿಸರ ಸ್ನೇಹಿ, ಕಡಿಮೆ ಇಂಧನ ವೆಚ್ಚ…ಮತ್ತಿತರ ಪೂರಕ ಅಂಶಗಳು ಎಲೆಕ್ಟ್ರಿಕ್ ವಾಹನ ಕೊಳ್ಳುವವರನ್ನು ಆಕರ್ಷಿಸುತ್ತಿದೆ.

ಕೊಡಗಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಆಸಕ್ತಿ ಅಷ್ಟಕ್ಕಷ್ಟೇ ಎನ್ನುವಂತೆ ಇತ್ತು. ಇಲ್ಲಿನ ಜೋರು ಮಳೆ, ಮೈ ನಡುಗಿಸುವ ಚಳಿ, ಬೆಟ್ಟಗುಡ್ಡಗಳ ಮೇಲಿನ ಏರಿಳಿತದ ರಸ್ತೆಗಳು, ವಿದ್ಯುತ್ ಸಮಸ್ಯೆ.. ಹೀಗೆ ಅನೇಕ ಕಾರಣಗಳಿಂದ ಇವಿಗಳ ಬಗ್ಗೆ ಸ್ಥಳೀಯರು ನಿರಾಸಕ್ತಿ ತೋರಿಸಿದ್ದರು. ತಂತ್ರಜ್ಞಾನ ಬೆಳೆದಂತೆ ಇವಿಗಳಲ್ಲೂ ಸುಧಾರಣೆನ ಕಂಡುಬರುತ್ತಿದ್ದು, ಎಲ್ಲಾ ಹವಾಮಾನ, ಭೌಗೋಳಿಕ ಪರಿಸ್ಥಿತಿಗಳಿಗೂ ಹೊಂದಿಕೆ ಆಗಬಹುದಾದ ವಾಹನಗಳು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಜಿಲ್ಲೆಯಲ್ಲೂ ಕೆಲವು ಪ್ರಯೋಗಶೀಲ ಮನಸ್ಥಿತಿಯವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಯ ಮನಸ್ಸು ಮಾಡಿದರು. ಮೊದಲು ಕುಶಾಲನಗರ ಭಾಗದಲ್ಲಿ ಕಾಣಿಸಿಕೊಂಡ ಇವಿಗಳು ನಂತರ ಜಿಲ್ಲೆಯಾದ್ಯಂತ ರಸ್ತೆಗೆ ಇಳಿದಿವೆ. ಗ್ರಾಮೀಣ ಪ್ರದೇಶಗಳಲ್ಲೂ ಓಡಾಡುವುದನ್ನು ಕಾಣಬಹುದಾಗಿದೆ. ೨೦೧೯ರಲ್ಲಿ ಮಡಿಕೇರಿ ಆರ್‌ಟಿಒದಲ್ಲಿ ಕೇವಲ ೧ ಎಲೆಕ್ಟ್ರಿಕ್ ವಾಹನ ನೋಂದಣಿ ಆಗಿತ್ತು. ೨೦೨೦ರಲ್ಲಿ ೧೯, ೨೦೨೧ರಲ್ಲಿ ೩೨, ೨೦೨೨ರಲ್ಲಿ ೧೪೮ ಹಾಗೂ ೨೦೨೩ರಲ್ಲಿ ೨೦೩ ಸೇರಿದಂತೆ ಒಟ್ಟು ೪೦೮ ಎಲೆಕ್ಟ್ರಿಕ್ ವಾಹನಗಳು ಜಿಲ್ಲೆಯಲ್ಲಿ ನೋಂದಣಿ ಆಗಿವೆ.
ಈಗಾಗಲೇ ಮಾರುಕಟ್ಟೆಯಲ್ಲಿ ಅದಿಪತ್ಯ ಸ್ಥಾಪಿಸಿರುವ ದೊಡ್ಡ ದೊಡ್ಡ ವಾಹನ ಸಂಸ್ಥೆಗಳು ವಿಭಿನ್ನ ಶೈಲಿಯ, ಹೆಚ್ಚು ಸಾಮರ್ಥ್ಯದ ’ಇವಿ’ಗಳನ್ನು ಪೈಪೋಟಿ ಮೇಲೆ ಬಿಡುಗಡೆ ಮಾಡುತ್ತಿವೆ. ಸ್ಟಾರ್ಟ್‌ಅಪ್ ಕಂಪೆನಿಗಳಿಗೂ ಈ ಉದ್ಯಮ ಬೆಳವಣಿಗೆಯ ಅವಕಾಶ ಕೊಟ್ಟಿದೆ. ಸಾಂಪ್ರದಾಯಿಕ ವಾಹನಗಳಿಗಿಂತ ಬೆಲೆ ಹೆಚ್ಚು ಎನ್ನುವ ದೊಡ್ಡ ಹಿನ್ನಡೆ ನೀಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯೋಗಗಳು ನಡೆಯುತ್ತಿದೆ. ಅಗ್ಗದ ಮತ್ತು ದೀರ್ಘ ಬಾಳಿಕೆಯ ಬ್ಯಾಟರಿಗಳತ್ತ ಗಮನ ಕೇಂದ್ರೀಕರಿಸಿ ಸಂಶೋಧನೆಗಳು ಆಗುತ್ತಿದೆ. ಇಂತಹ ವಾಹನಗಳ ಉತ್ಪಾದನಾ ಪ್ರಮಾಣ ಮತ್ತು ಬಳಕೆ ಹೆಚ್ಚಾದರೆ ಬೆಲೆ ಸಹಜವಾಗಿ ಇಳಿಯಬಹುದು ಎನ್ನುವುದು ಡೀಲರ್‌ಗಳ ಮಾತು.

ನಾನು ಎಲೆಕ್ಟ್ರಿಕ್ ಬೈಕ್ ಬಳಸುತ್ತಿದ್ದೇನೆ. ಬೇರೆ ವಾಹನಕ್ಕೆ ಹೋಲಿಸಿದರೆ ಈ ವಾಹನ ಉತ್ತಮವಾಗಿದೆ. ಖರ್ಚು ಕಡಿಮೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು ೮೦ ಕಿ.ಮೀ. ಓಡಿಸಬಹುದು. ಇದೊಂದು ಮಿತವ್ಯಯಿ ವಾಹನ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ದಿನಗಳಲ್ಲಿ ಇ-ವಾಹನಗಳು ಒಳ್ಳೆಯ ಪರ್ಯಾಯ ಎನ್ನಬಹುದು. ಬೆಲೆ ಕಡಿಮೆ ಆದರೆ ಇವಿ ಖರೀದಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಾಣಬಹುದು. ಪರಿಸರಕ್ಕೆ ಪೂರಕ ಇಂತಹ ವಾಹನಗಳ ಬಳಕೆಗೆ ಪ್ರೋತ್ಸಾಹದ ಅಗತ್ಯವಿದೆ.
ಸಾದಿಕ್, ಶನಿವಾರಸಂತೆ