ಸಮಯ ಪ್ರಜ್ಞೆ ಮೆರೆದ ಅಶ್ಫಿಯಾ. 
ಜಿಲ್ಲೆ

ಶಾಲೆಯಲ್ಲಿ ವಿದ್ಯಾರ್ಥಿನಿಗೆ ವಿದ್ಯುತ್ ಆಘಾತ: ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಸಹಪಾಠಿ!

ಉಳ್ಳಾಲ: ಇರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ವಿದ್ಯುತ್ ಆಘಾತಕ್ಕೊಳಗಾಗಿದ್ದು, ಇನ್ನೋರ್ವ ವಿದ್ಯಾರ್ಥಿನಿ ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಫ್ಯಾನ್‌ ಸ್ವಿಚ್‌ನಿಂದ ವಿದ್ಯುತ್ ಆಘಾತ

ಜೂ.14ರಂದು ಇರಾ ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಶರಫೀಯ ಎಂಬಾಕೆ ವಿದ್ಯುತ್ ಅಘಾತಕ್ಕೊಳಗಾಗಿದ್ದಳು. ಅಂದು ಮಧ್ಯಾಹ್ನ ಊಟದ ಸಮಯದಲ್ಲಿ ಫ್ಯಾನ್‌ಗೆ ಸ್ವಿಚ್ ಹಾಕಲು ಶರಫೀಯ ಮುಂದಾಗಿದ್ದು, ಈ ಸಂದರ್ಭ ವಿದ್ಯುತ್ ಆಘಾತಕ್ಕೊಳಗಾಗಿದ್ದಾಳೆ.

ಸಮಯ ಪ್ರಜ್ಞೆ ಮೆರೆದ ಅಶ್ಫಿಯಾ

ಇದನ್ನು ಗಮನಿಸಿದ ಆಕೆಯ ಸಹಪಾಠಿ ಫಾತಿಮತುಲ್ ಅಶ್ಫಿಯಾ ಸಮಯ ಪ್ರಜ್ಞೆ ಮೆರೆದು ಊಟಕ್ಕಾಗಿ ಕೈಯಲ್ಲಿ ಹಿಡಿದಿದ್ದ ತನ್ನ ಬಟ್ಟಲನ್ನು ಗೆಳತಿಯ ಕೈಗೆ ಎಸೆದು ಶರಫೀಯಳ ಕೈ ವಿದ್ಯುತ್ ಸ್ವಿಚ್‌ನಿಂದ ತಪ್ಪುವಂತೆ ಮಾಡಿದ್ದಾಳೆ. ಇದರಿಂದಾಗಿ ಶರಫೀಯಳ ಕೈಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಅಶ್ಫಿಯಾಗೆ ವ್ಯಾಪಕ ಶ್ಲಾಘನೆ

ಸಹಪಾಠಿಯ ಪ್ರಾಣವನ್ನು ರಕ್ಷಿಸಿದ ಅಶ್ಫಿಯಾಳ ಸಮಯಪ್ರಜ್ಞೆ ವ್ಯಾಪಕವಾಗಿ ಶ್ಲಾಘನೆಗೆ ಒಳಗಾಗಿದೆ. ಆದರೆ ಶಾಲಾ ಕೋಣೆಯಲ್ಲಿ ವಿದ್ಯುತ್ ನಿರ್ವಹಣೆಯ ಬಗ್ಗೆ ನಿರ್ಲಕ್ಷ್ಯ ತಾಳಿದ ಶಿಕ್ಷಕ ವರ್ಗದ ಬಗ್ಗೆಯೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.