ವಿಜಯವಾಣಿ ಸುದ್ದಿಜಾಲ ಧಾರವಾಡ: ಹೊಲದಿಂದ ಮನೆಗೆ ವಾಪಸ್ ಹೋಗುತ್ತಿದ್ದ ವೇಳೆ ಗಾಳಿಗೆ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎತ್ತು ಮೃತಪಟ್ಟ ಘಟನೆ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಸೋಮಾಪುರ ಗ್ರಾಮದ ಗಿರಿಯಪ್ಪ ಉಳ್ಳಾಗಡ್ಡಿ ಎಂಬ ರೈತನ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಎತ್ತು ವಿದ್ಯುತ್ ಅವಘಡದಿಂದ ಸಾವನ್ನಪ್ಪಿದೆ.
ಚಕ್ಕಡಿ ಹೂಡಿಕೊಂಡು ಹೊಲದಿಂದ ಮನೆಗೆ ಹೋಗುತ್ತಿದ್ದ ವೇಳೆ ವಿದ್ಯುತ್ ತಂತಿ ಗಾಳಿಗೆ ತುಂಡರಿಸಿ ಬಿದ್ದಿತ್ತು. ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದ ಎತ್ತು ಸ್ಥಳದಲ್ಲೇ ಮೃತಪಟ್ಟಿದೆ. ಗಾಬರಿಗೊಂಡ ರೈತ ಚಕ್ಕಡಿಯಿಂದ ಜಿಗಿದು ಇನ್ನೊಂದು ಎತ್ತಿನ ಪ್ರಾಣ ಉಳಿಸಿದ್ದಾನೆ. ಸಂಜೆವರೆಗೂ ಜಮೀನಿನಲ್ಲಿ ಉಳುಮೆ ಮಾಡಿದ್ದ ಎತ್ತು ಮೃತಪಟ್ಟಿದ್ದನ್ನು ಕಂಡ ರೈತ ಎತ್ತಿನ ಮುಂದೆ ಕುಳಿತು ಗೋಳಾಡಿದ.