ಜಿಲ್ಲೆ

ವಿದ್ಯುತ್‌ ಬೆಲೆ ಏರಿಕೆ ವಿರೋಧಿಸಿ ನಾಳೆ ಕಾರವಾರ ಮಾರುಕಟ್ಟೆ ಬಂದ್‌

Uttara Kannada - Subash Hegde

ಕಾರವಾರ: ವಿದ್ಯುತ್ ಬೆಲೆ ಏರಿಕೆ ವಿರೋಧಿಸಿ ಜೂನ್ 22 ರಂದು ಕಾರವಾರ ಮಾರುಕಟ್ಟೆಯನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.

ಕಾರವಾರ ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಜಿತೇಂದ್ರ ಥನ್ನಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಬುಧವಾರ ಹೆಸ್ಕಾಂಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ.

ಕರೊನಾ ಸಂಕಷ್ಟದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಆರ್ಥಿಕ ವಹಿವಾಟುಗಳಿಗೆ ವಿದ್ಯುತ್ ಬೆಲೆ ಏರಿಕೆ ಬರೆ ಎಳೆದಿದೆ. ಇದರಿಂದ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಛೇಂಬರ್ ಆಫ್ ಕಾಮರ್ಸ್ ಒತ್ತಾಯಿಸಿದೆ. ಜೂ. 22 ಎಂದು ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೂ ಮನವಿ ಸಲ್ಲಿಸಲಾಗುವುದು ಎಂದು ಥನ್ನಾ `ವಿಜಯವಾಣಿ'ಗೆ ತಿಳಿಸಿದ್ದಾರೆ. ಬೆಳಗ್ಗೆಯಿಂದ ಸಾಯಂಕಾಲದವರೆಗೂ ನಗರದ ಅಂಗಡಿ ಮುಂಗಟ್ಟುಗಳು ಬಂದ್‌ ಇರಲಿವೆ.
ಟೆಂಪೋ ಆಟೋ ಬಂದ್
ವಿದ್ಯುತ್ ಬೆಲೆ ಏರಿಕೆ ಹಾಗೂ ಶಕ್ತಿ ಯೋಜನೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹಾರಿಸುವಂತೆ ಆಗ್ರಹಿಸಿ ಜೂ.22 ರಂದು ಆಟೋ, ಟೆಂಪೋ ಸಂಚಾರ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಆಟೋ ಚಾಲಕರು, ಮಾಲೀಕರ ಸಂಘದ ಅಧ್ಯಕ್ಷ ದಿಲೀಪ ಅರ್ಗೇಕರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರು ಅವರು, ವಿದ್ಯುತ್ ಬೆಲೆ ಏರಿಕೆಯಿಂದ ಸಮಸ್ಯೆ ಉಂಟಾಗಿದೆ. ಈ ನಡುವೆ ಶಕ್ತಿ ಯೋಜನೆಯಿಂದ ಟೆಂಪೋ ಹಾಗೂ ಆಟೋಗಳಿಗೆ ಹತ್ತುವ ಜನರು ಕಡಿಮೆಯಾಗಿದ್ದಾರೆ. ಆಟೋ ಚಾಲಕರು, ಮಾಲೀಕರು, ಟೆಂಪೋ ಚಾಲಕರು, ಅದರಲ್ಲಿ ದುಡಿಯುವವರು ಜೀವನ ನಡೆಸುವುದೇ ಕಷ್ಟವಾಗಿದೆ. ಈ ಎಲ್ಲ ಬೇಡಿಕೆ ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

10 ಸಾವಿರ ರೂ. ಪರಿಹಾರ ನೀಡಿ

ರಾಜ್ಯ ಸಾರಿಗೆ ಸಂಸ್ಥೆಗಳ ಆಯ್ದ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಿಂದ ಆಟೋ ಚಾಲಕರು, ಮಾಲೀಕರಿಗೆ ಸಮಸ್ಯೆಯಾಗಿದ್ದು, ತಮಗೆ ಮಾಸಿಕ ತಲಾ 10 ಸಾವಿರ ರೂ. ಪರಿಹಾರದ ಪ್ಯಾಕೇಜ್ ಘೋಷಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಆಟೋ ಚಾಲಕ ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವರಾಜ ಮೇಸ್ತ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಸಂದರ್ಭದಲ್ಲಿ ಆಟೋ ಚಾಲಕರು ತುಂಬಾ ಸಂಕಷ್ಟ ಅನುಭವಿಸಿದ್ದರು. ಬೆಲೆಯೇರಿಕೆಯಿಂದ ತೊಂದರೆಗೆ ಒಳಗಾಗಿದ್ದರು. ಈಗ ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರಿಲ್ಲದೇ ಪರದಾಡುವಂತಾಗಿದೆ. ಇದರಿಂದ ಪ್ಯಾಕೇಜ್ ನೀಡಬೇಕು ಎಂದು ಮನವಿ ಮಾಡಿದರು.
ಆಟೋ ಚಾಲಕರು ಅಸಂಘಟಿತ ವಲಯಕ್ಕೆ ಸೇರಿದ್ದು, ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕ ಮಂಡಳಿ ನೀಡುವ ಎಲ್ಲ ಸೌಲಭ್ಯಗಳನ್ನು ಆಟೋ ಚಾಲಕರಿಗೂ ನೀಡಬೇಕು. ಪ್ರವಾಸೋದ್ಯಮ ಹೆಸರಿನಲ್ಲಿ ಹೊಸ ಪರವಾನಗಿ ನೀಡುವುದಕ್ಕೆ ಖಡಿವಾಣ ಹಾಕಬೇಕು. ಆಟೋ ರಿಕ್ಷಾ ಪರವಾನಗಿಯನ್ನು 7 ರಿಂದ 40 ಕಿಮೀವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಉದಯ ಡಿ.ನಾಯ್ಕ, ಕೃಷ್ಣಾ ಎನ್.ನಾಯ್ಕ ಭಟ್ಕಳ ಇತರರು ಇದ್ದರು.
………..