ಪುತ್ತೂರು: ಸುಳ್ಯ ಭಾಗಕ್ಕೆ ವಿದ್ಯುತ್ ಪೂರಸುವ ನಿಟ್ಟಿನಲ್ಲಿ ಈಗಾಗಲೇ ಇರುವ 33ಕೆ. ವಿ. ವಿದ್ಯುತ್ ಮಾರ್ಗವನ್ನು ಮೇಲ್ದರ್ಜೆಗೇರಿಸುವ ಕಾರ್ಯ ಮಾಡಬಹುದು.. ಹೆದ್ದಾರಿ ಬದಿಯಲ್ಲಿ ಅಥವಾ ಮಣ್ಣಿನ ಅಡಿಯಲ್ಲಿ ಮಾರ್ಗ ಅಳವಡಿಸುವ ಕಾರ್ಯ ಮಾಡಲಿ.. ಐವರ್ನಾಡಿನಿಂದ ವಿದ್ಯುತ್ ಮಾರ್ಗ ಹೋಗುವುದರಿಂದ ದೂರ ಕಡಿಮೆಯಾಗಿ ಯೋಜನೆಗೆ ವೆಚ್ಚವೂ ಕಡಿಮೆಯಾಗಲಿದ್ದು, ಅಧಿಕಾರಿಗಳು ಮನಸು ಮಾಡಬೇಕಾಗಿದೆ..
ಇದು ಪುತ್ತೂರು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಛೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಹಾಗೂ ರೈತರ ಸಭೆಯಲ್ಲಿ ಕೆಯ್ಯೂರು - ಮಾಡಾವು - ಪಾಲ್ತಾಡು - ಕನಕಮಜಲು - ಅಜ್ಜಾವರ - ಜಾಲ್ಸೂರು - ಸುಳ್ಯ ಸಂಪರ್ಕ ಕಲ್ಪಿಸುವ 22ಕಿ. ಮೀ. ಉದ್ದದ ಕೆ.ಪಿ.ಟಿ.ಸಿ.ಎಲ್. 110ಕೆ. ವಿ. ವಿದ್ಯುತ್ ಮಾರ್ಗದಿಂದ ಸಂಕಷ್ಟಕ್ಕೊಳಗಾದ ರೈತರ ಬೇಡಿಕೆಯಾಗಿದೆ.
ಕೆ.ಪಿ.ಟಿ.ಸಿ.ಎಲ್. ಮಂಗಳೂರಿನ ಅಧೀಕ್ಷಕ ರವಿಕಾಂತ ಕಮಲ್ ಮಾತನಾಡಿ ಸುಳ್ಯ ೧೧೦ ಕೆವಿ ವಿದ್ಯುತ್ ಮಾರ್ಗ ಯೋಜನೆಯ ಸರ್ವೇ ಕಾರ್ಯ ಹಲವು ವರ್ಷಗಳಿಂದ ನಡೆಯುತ್ತಿದ್ದು, ಈಗ ಒಂದು ಮಾರ್ಗವನ್ನು ಅಂತಿಗೊಳಿಸಲಾಗಿದೆ. ವಾಸ ಇರುವ ಮನೆಯ ಮೇಲೆ, ಸ್ಮಾರಕಗಳು ಇದ್ದರೆ ಅದರ ಬಳಿಯಲ್ಲಿ ವಿದ್ಯುತ್ ತಂತಿಗಳನ್ನು ಯಾವುದೇ ಕಾರಣಕ್ಕೂ ತೆಗೆದುಕೊಂಡು ಹೋಗುವುದಿಲ್ಲ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ ಸುಳ್ಯ ವಿದ್ಯುತ್ ಮಾರ್ಗದಿಂದ ಸದ್ಯ ಕೆಯ್ಯೂರು, ಪಾಲ್ತಾಡಿ, ಕೊಳ್ತಿಗೆ ಗ್ರಾಮಗಳಿಗೆ ಸಮಸ್ಯೆಯಾಗುತ್ತಿದೆ. ಕೃಷಿಕರಿಗೆ ತೊಂದರೆ ಆಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು. ಭೂಮಿಯ ಒಳಗೆ ತೆಗೆದುಕೊಂಡು ಹೋಗುವ ತಂತ್ರಜ್ಞಾನಗಳಿದ್ದು, ಆ ಬಗ್ಗೆಯೂ ಹೆಚ್ಚಿನ ಗಮನವನ್ನು ನೀಡಬೇಕು ಎಂದು ಹೇಳಿದರು.
ಸಾಧಕ ಬಾಧಕಗಳ ಮಾಹಿತಿಯನ್ನು ನೀಡುವ ಕಾರ್ಯ ಇಲಾಖೆ ಮಾಡಬೇಕು. ಜನಪ್ರತಿನಿಧಿಗಳ ಒತ್ತಡಕ್ಕೆ ರೈತರಿಗೆ ತೊಂದರೆಯಾಗುವಂತೆ ಯಾವ ಇಲಾಖೆಯವರು ಕೆಲಸ ಮಾಡುವಂತಾಗಬಹುದು. ಕಡಿಮೆ ಖರ್ಚಿನಲ್ಲಿ ಆಗುವ ವಿದ್ಯುತ್ ಮಾರ್ಗವನ್ನು ಮಾಡುವುದು ಬಿಟ್ಟು ರೈತರಿಗೆ ತೊಂದರೆಯಾಗುವ ವಿದ್ಯುತ್ ಮಾರ್ಗವನ್ನು ಮಾಡುವ ಉದ್ದೇಶವೇನು. ಸ್ಥಳೀಯ ಶಾಸಕರು, ಸಂಸದರ ನೇತೃತ್ವದಲ್ಲಿ ಸಭೆಯನ್ನು ನಡೆಸಿದ ಬಳಿಕವೇ ಯೋಜನೆಯ ಸರ್ವೇ ಕಾರ್ಯ ಮುಂದುವರಿಸಬೇಕೆಂದು ಆಗ್ರಹಿಸಿದರು.
ಕೆ.ಪಿ.ಟಿ.ಸಿ.ಎಲ್. ಮಂಗಳೂರು ಕಾರ್ಯನಿರ್ವಾಹಕ ಅಭಿಯಂತರ ಗಂಗಾಧರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿವೇಕಾನಂದ, ಮೆಸ್ಕಾಂ ಪುತ್ತೂರು ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ, ಹೋರಾಟ ಸಮಿತಿಯ ಅಧ್ಯಕ್ಷ ಹಾಲುಮಜಲು ವೆಂಕಟ್ರಾಯ, ಪಳ್ಳತ್ತಡ್ಕ ವಿಶ್ವನಾಥ ಗೌಡ, ಕಲಾಯಿ ಸೀತಾರಾಮ ರೈ, ಶ್ರೀಧರ ಅಂಗಡಿಹಿತ್ತಲು, ಪ್ರಸಾದ್ ಪಳ್ಳತ್ತಡ, ದೇವಳಿಕೆ ತಿಮ್ಮಪ್ಪ, ಕೃಷ್ಣ ಪ್ರಸಾದ್ ಮಾಡಾವು, ದನಂಜಯ ಪೂಜಾರಿ ಕೊಳ್ತಿಗೆ, ಹರೀಶ್ ಗೌಡ ಮಾಡಾವು, ಸತ್ಯವತಿ ಕೊಳ್ತಿಗೆ, ಲಲಿತ, ಕಮಲ ಮತ್ತಿತರರು ಉಪಸ್ಥಿತರಿದ್ದರು.