ಹುಮನಾಬಾದ್: ವಿದ್ಯುತ್ ಗುತ್ತಿಗೆದಾರರ ತಕ್ಷಣ ಬಿಲ್ ಪಾವತಿ ಸೇರಿ 14 ಪ್ರಮುಖ ಬೇಡಿಕೆ ಈಡೇರಿಸುವ ಸಂಬಂಧ ನೀಡಿರುವ ಆದೇಶ ದಿಢೀರ್ ರದ್ದುಗೊಳಿಸಿದ ಜೆಸ್ಕಾಂ ಎಂಡಿ ಕ್ರಮ ವಿರೋಧಿಸಿ ಹುಮನಾಬಾದ ವಿಭಾಗಿಯ ಕರ್ನಾಟಕ ರಾಜ್ಯ ವಿದ್ಯುತ್ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಮಂಗಳವಾರದಿಂದ ಅನಿರ್ಧಿಷ್ಟ ಅವದಿ ವರೆಗೆ ಕರ್ತವ್ಯ ಸ್ಥಗಿತಗೊಳಿಸಿ ವಿದ್ಯುತ್ ಗುತ್ತಿಗೆದಾರರು ಹೋರಾಟ ಆರಂಭಿಸಿದ್ದಾರೆ.
ಪಟ್ಟಣದ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಎದುರಿಗೆ ವಿಭಾಗದ ವ್ಯಾಪ್ತಿಯ ಹುಮನಾಬಾದ, ಮನ್ನಾಎಖೇಳ್ಳಿ, ಬಸವಕಲ್ಯಾಣದ ಎಲ್ಲಾ ವಿದ್ಯುತ್ ಗುತ್ತಿಗೆದಾರರು ಮೀಟರ್ ಅಳವಡಿಕೆ ಸೇರಿ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ, ಇಲ್ಲಿನ ಜೆಸ್ಕಂ ಕಾರ್ಯನಿರ್ವಾಹಕ ಅಭಿಯಂತರ ಶಂಕರ ಅಡಕಿ ಅವರಿಗೆ ಸಂಘದಿಂದ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ದಯಾನಂದ ಪಾಟೀಲ್ ಮಾತನಾಡಿ, ವಿದ್ಯುತ್ ಗುತ್ತಿಗೆದಾರರ ಬೇಡಿಕೆ ಈಡೇರುವವರೆಗೆ ಕೆಲಸ ಮಾಡುವುದಿಲ್ಲ ಎಂದು ಎಚ್ಚರಿಸಿದರು. ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗುತ್ತಿಗೆದಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇತ್ತೀಚೆಗೆ ಕಲಬುರಗಿಯಲ್ಲಿ ಬೃಹತ್ ಹೋರಾಟ ನಡೆಸಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಜೆಸ್ಕಾಂ ತಾಂತ್ರಿಕ ನಿರ್ದೇಶಕರು ಬೇಡಿಕೆ ಈಡೇರಿಕೆ ಸಂಬಂಧ ಆದೇಶ ಹೊರಡಿಸಿದ್ದರು. ಆದರೆ ವ್ಯವಸ್ಥಾಪಕ ನಿರ್ದೇಶಕರು ಆದೇಶಕ್ಕೆ ಬ್ರೇಕ್ ಹಾಕಿ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಗುತ್ತಿಗೆ ನೀಡುವುದು, ಪೂರ್ಣಗೊಂಡ ಎಲ್ಲ ಕಾಮಗಾರಿಗಳ ಬಿಲ್ ತಕ್ಷಣ ಪಾವತಿಸಬೇಕು, ವಿಭಾಗವಾರು ಬಜೆಟ್ ಒದಗಿಸಬೇಕು ಎನ್ನುವುದು ಸೇರಿ 14 ಬೇಡಿಕೆಗಳಿವೆ. ನಮಗೆ ನ್ಯಾಯ ಸಿಕ್ಕೀತು ಎಂಬ ಖುಷಿಯಲ್ಲಿ ಇರುವಾಗಲೇ ಜೆಸ್ಕಾಂ ಎಂಡಿ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು . ಕೂಡಲೇ ಬೇಡಿಕೆ ಇಡೇರಿಸಬೇಕು ಎಂದು ಒತ್ತಾಯಿಸಿದರು.ಬೇಡಿಕೆ ಇಡೇರಿಸುವ ವರಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು. ಸಂಘದ ಪ್ರಮುಖರಾದ ಜಗನಾಥ ಖಂಡೋಳಕರ, ಮಲ್ಲು ಸ್ವಾಮಿ, ಪವಾನ ತೆಲಾಂಗ, ಬೂದಯ್ಯಾ ಸ್ವಾಮಿ, ಕಾಶಿನಾಥ ಸಿಂಧನಕೇರಿ, ಮಲ್ಲಪ್ಪ ಚೀನಕೇರಾ, ಸಾಗರ ಬಿರಾದಾರ, ಮಹಾಲಿಂಗ ಸ್ವಾಮಿ, ತಾಜೋದ್ದಿನ್ ಪಟೇಲ್, ಮಹಾದೇವ ಸ್ವಾಮಿ, ಅರ್ಷದ ಮಾಹಗಾವಿ, ಜ್ಞಾನೇಶ್ವರ ಪಾಟೀಲ್, ವಾಜೀದ್ ಹುಸೇನ್, ಹಿದಾಯಿತ್ ಖಾನ್, ಆಕಾಶ ಚವ್ಹಾಣ, ಶ್ರೀಕಾಂತ ಹಿರೋಳೆ, ಮಸ್ಥಾನ ಪಟೇಲ್, ಕರಣ ಆಣದೂರೆ ಸೇರಿದಂತೆ ಗುತ್ತಿಗೆದಾರರು ಪಾಲ್ಗೊಂಡಿದ್ದರು.