ಮಡಿಕೇರಿ: ಭಾರತ ಚುನಾವಣಾ ಆಯೋಗವು ಪ್ರತೀ ವರ್ಷ ಜ.೧ ನ್ನು ಅರ್ಹತಾ ದಿನಾಂಕವಾಗಿ ನಿಗಧಿಪಡಿಸಿಕೊಂಡು ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯವನ್ನು ಕೈಗೊಳ್ಳಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದರು.
ನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರ ಜೊತೆ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಅ.೨೯ ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ನ.೨೮ ರವರೆಗೆ ಸರಿಪಡಿಸಿಕೊಳ್ಳಲು/ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ನ.೯, ೧೦, ೨೩ ಮತ್ತು ೨೪ ರಂದು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ವಿಶೇಷ ಅಭಿಯಾನ ನಡೆಯಲಿದೆ. ಡಿ.೨೪ ರಂದು ಮನವಿ/ ಆಕ್ಷೇಪಣೆಗಳ ಸರಿಪಡಿಸುವ ಕಾರ್ಯ ನಡೆಯಲಿದೆ. ೨೦೨೫ ರ ಜ.೧ ರಂದು ಅಂತಿಮ ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ನಡೆಯಲಿದೆ. ೨೦೨೫ ಜ.೬ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಈ ಸಂಬಂಧ ತಮ್ಮ ತಮ್ಮ ಹಂತದಲ್ಲಿ ಮಾಹಿತಿ ನೀಡುವಂತೆ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಆರ್.ಐಶ್ವರ್ಯ ಕೋರಿದರು.
ಈ ಬಾರಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೨ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ೪ ಮತಗಟ್ಟೆಗಳು ಒಟ್ಟು ೬ ಮತಗಟ್ಟೆಗಳು ಹೆಚ್ಚಳವಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಗದ್ದೆಹಳ್ಳ, ಗುಮ್ಮನಕೊಲ್ಲಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಡಗ ಬಾನಂಗಾಲ(ಹುಂಡಿ), ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಶಾಲಪ್ಪ ಮೆಮೋರಿಯಲ್ ಬಳಿಯ ಶಿಶು ವಿಹಾರ ಕೇಂದ್ರ, ಗೋಣಿಕೊಪ್ಪ ರಸ್ತೆ ಹಾಗೂ ಪಂಜರಪೇಟೆಯ ಉರ್ದುಶಾಲೆ ಇಲ್ಲಿ ಹೊಸ ಮತಗಟ್ಟೆಗಳು ಸ್ಥಾಪನೆಯಾಗಿದೆ ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಕೊಡಗು ಜಿಲ್ಲೆಯ ೨೦೮-ಮಡಿಕೇರಿ ಮತ್ತು ೨೦೯-ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆಗಳಲ್ಲಿ, ತಾಲೂಕು ಕಚೇರಿಗಳಲ್ಲಿ, ಉಪ ವಿಭಾಗಾಧಿಕಾರಿಗಳ ಕಚೇರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯವರ ಕಚೇರಿಯಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ಅ.೨೯ ರಂದು ಪ್ರಕಟಣೆ ಮಾಡಲಾಗಿದ್ದು, ಸಾರ್ವಜನಿಕರು ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ ಎಂದರು.
೨೦೨೪ ರ ಅ.೨೯ ರಂದು ಪ್ರಕಟಣೆ ಮಾಡಿದ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ೫೫೨ ಮತಗಟ್ಟೆಗಳಲ್ಲಿ ೪,೭೪,೦೯೭ ಮತದಾರರು ಇದ್ದಾರೆ. ಇದರಲ್ಲಿ ೨,೩೨,೦೪೧ ಪುರುಷರು, ೨,೪೨,೦೪೧ ಮಹಿಳಾ ಮತದಾರರು ಹಾಗೂ ೧೫ ಇತರ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.
ಅ.೨೯ ರಿಂದ ನ.೨೮ ರವರೆಗೆ ೨೦೨೫ರ ಜ.೧, ೨೦೨೫ ರ ಏ.೧, ೨೦೨೫ ರ ಜು.೧ ಮತ್ತು ೨೦೨೫ ರ ಅ.೧ಕ್ಕೆ ೧೮ ವರ್ಷ ಪೂರ್ಣಗೊಳ್ಳುವ ಯುವಕ, ಯುವತಿಯರು ಮತ್ತು ೧೮ ವರ್ಷ ಮೇಲ್ಪಟ್ಟ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ-೬ ರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-೮ ರಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಆರ್.ಐಶ್ವರ್ಯ ವಿವರಿಸಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ೧೫೦೦ ಕ್ಕಿಂತ ಹೆಚ್ಚು ಮತದಾರರು ಇರುವ ಕೊಡಗು ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳಿಂದ ಒಟ್ಟು ೬ ಮತಗಟ್ಟೆಗಳನ್ನು ಪುನರ್ ವಿಂಗಡಣೆ ಮಾಡಿ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಭಾರತ ಚುನಾವಣಾ ಆಯೋಗವು ಪ್ರಸ್ತಾವನೆಗೆ ಅನುಮೋದನೆ ನೀಡಿದೆ ಎಂದು ಆರ್.ಐಶ್ವರ್ಯ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರತಿನಿಧಿ ತೆನ್ನಿರಾ ಮೈನಾ ಮಾತನಾಡಿ, ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯ ಪ್ರತೀ ಬೂತ್‌ಗಳಿಗೆ ಬಿಎಲ್‌ಎ(ಬೂತ್ ಮಟ್ಟದ ಏಜೆಂಟ್) ಗಳನ್ನು ನಿಯೋಜಿಸಲಾಗಿದೆ. ಅವರನ್ನು ಬೂತ್ ಮಟ್ಟದ ಅಧಿಕಾರಿಗಳ ಜೊತೆ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಪ್ರಮುಖರಾದ ಸಜಿಲ್ ಕೃಷ್ಣ, ಬಹುಜನ ಸಮಾಜ ಪಕ್ಷದ ಕವಿತಾ ಅವರು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಹಲವು ಮಾಹಿತಿ ನೀಡಿದರು. ಚುನಾವಣಾ ಶಿರಸ್ತೇದಾರ್ ಕೆ.ಜಿ.ಮಧುಕರ, ಅನಿಲ್ ಕುಮಾರ್ ಇದ್ದರು.