ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಜನತಾ ಕಾಲನಿನಲ್ಲಿ ಬುಧವಾರ ರಾತ್ರಿ ಕಾಡಾನೆಯೊಂದು ವಿದ್ಯುತ್ ಕಂಬಗಳನ್ನು ಮುರಿದು ಹಾಕಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಜನತಾ ಕಾಲನಿ ಮುಂಭಾಗದಲ್ಲಿರುವ ಬಿಲ್‌ಲಕ್ಷ್ಮೀ ಕೊಳದ ಬಳಿ ಸಾರ್ವಜನಿಕ ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಇಲ್ಲಿರುವ ಕೊನೆಯ ಕಂಬದ ಮೇಲೆ ಕಾಡಾನೆ ದಾಳಿ ನಡೆಸಿ ಕೆಳಕ್ಕೆ ಉರುಳಿಸಿದೆ. ಇದರ ರಭಸಕ್ಕೆ ಇದರ ಮುಂದಿರುವ ಕಂಬವೂ ನೆಲಕ್ಕುರುಳಿದೆ. ವಿದ್ಯುತ್ ತಂತಿಗಳು ಕಿತ್ತು ಬಂದಿವೆ. ವಿದ್ಯುತ್ ತಂತಿಗಳು ಪ್ಲಾಸ್ಟಿಕ್ ಇನ್ಸುಲೇಟೆಡ್ ಆಗಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ.
ಈ ಭಾಗದಲ್ಲಿ ಬಿದಿರು ಮೆಳೆಗಳು ಸಮೃದ್ಧವಾಗಿದ್ದು ಇದನ್ನು ತಿನ್ನಲು ಬಂದು ಆನೆ ವಿದ್ಯುತ್ ಕಂಬದ ಮೇಲೆ ದಾಳಿ ನಡೆಸಿರಬಹುದು ಎನ್ನಲಾಗಿದೆ. ಈ ಬಗ್ಗೆ ಸೆಸ್ಕ್‌ನ ಎಇಇ ಲಿಂಗರಾಜು ಮಾಹಿತಿ ನೀಡಿ, ಇದು ಇನ್ಸುಲೇಟೆಡ್ ವಿದ್ಯುತ್ ತಂತಿಗಳಾಗಿದ್ದು ಅಪಾಯ ತಪ್ಪಿದೆ. 2 ವಿದ್ಯುತ್ ಕಂಬಗಳು ಮುರಿದಿದ್ದು ಕೂಡಲೇ ಈ ಬಗ್ಗೆ ನಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದು ಕಂಬಗಳನ್ನು ಬದಲಿಸಲು ಕ್ರಮ ವಹಿಸಲಾಗುವುದು ಎಂದರು.