ಗಂಗಾಧರ್ ಬೈರಾಪಟ್ಟಣ ರಾಮನಗರ
ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಕಾವು ದೇವರ ಸನ್ನಿಧಾನಕ್ಕೂ ವ್ಯಾಪಿಸಿದೆ. ಕ್ಷೇತ್ರದಲ್ಲಿ ಚುನಾವಣೆ ಮುಗಿದ ನಂತರ ಸೋಲು& ಗೆಲುವಿನ ಲೆಕ್ಕಾಚಾರ ನಡೆಯುತ್ತಿರುವ ನಡುವೆಯೇ ನೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸಲಿ ಎಂದು ದೇವರ ಸನ್ನಿಧಾನದಲ್ಲಿ ಅವರ ಫೋಟೋ ಹಿಡಿದು ಬೇಡುವ ಕಾರ್ಯಕರ್ತರಿಗೆ ಏನೂ ಕಡಿಮೆ ಇಲ್ಲ ಎನ್ನುವಂತೆ ಆಗಿದೆ.
ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ಸಂಪೂರ್ಣ ಚಿತ್ರಣ ಗೊತ್ತಾಗಲಿದೆ. ಆದರೆ, ಯಾರಿಗೆ ಎಲ್ಲಿ ಲೀಡ್ ಸಿಗುತ್ತದೆ ಎನ್ನುವುದರ ಮೇಲೆಯೇ ಗೆಲುವು- ಸೋಲು ಗೊತ್ತಾಗಲಿದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಮೊದಲ ಬೂತ್ನಿಂದಲೇ ಎಣಿಕೆ ಆರಂಭವಾಗುತ್ತದೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಮೊದಲ ಬೂತ್ ಇರುವುದು ಮಾಕಳಿ ಗ್ರಾಮದಿಂದ, ಅಂತಿಮವಾಗಿ ಸರಗೂರು ಗ್ರಾಮದಲ್ಲಿ ಕೊನೆಯ ಬೂತ್ ಎಣಿಕೆ ನಡೆಯುತ್ತದೆ.
ಬೇವೂರು ಜಿಪಂ ವ್ಯಾಪ್ತಿಗೆ ಸೇರುವ ಮಾಕಳಿ ಸೇರಿ ಹಲವು ಕಡೆಗಳಲ್ಲಿ ಜೆಡಿಎಸ್ಗೆ ಮುನ್ನಡೆ ದೊರೆಯಲಿದೆ ಎನ್ನುವ ಲೆಕ್ಕಾಚಾರ. ಇದಾದ ನಂತರ ಚನ್ನಪಟ್ಟಣ ನಗರ ಪ್ರದೇಶದಲ್ಲಿ ದೊರೆಯುವ ಲೀಡ್ ಇಡೀ ಫಲಿತಾಂಶವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಸುಮಾರು 100-110 ಬೂತ್ಗಳ ಮತ ಎಣಿಕೆ ಫಲಿತಾಂಶದ ಚಿತ್ರಣ ಕಟ್ಟಿಕೊಡಲಿದೆ ಎನ್ನುವ ಚರ್ಚೆ ನಡೆದಿದೆ.
ನಂತರ ಮಳೂರು, ಹೊಂಗನೂರು ಮತ್ತು ಅಕ್ಕೂರು ಜಿಪಂ ವ್ಯಾಪ್ತಿಯ ಮತಗಳ ಎಣಿಕೆ ನಡೆಯಲಿದ್ದು, ಇಲ್ಲಿ ಕೌತುಕ ಉಳಿಯಬೇಕಾದರೆ ನಗರದ ಮತ ಗಳಿಕೆ ಮುಖ್ಯವಾಗಲಿದೆ.
ಕೌತುಕದ ಚುನಾವಣೆ ಇದಾಗಿರುವ ಕಾರಣ ಎಲ್ಲರಿಗೂ ಇದರ ಫಲಿತಾಂಶದ ಮೇಲೆಯೇ ಕಣ್ಣು. ಫಲಿತಾಂಶವನ್ನು ಎರಡು, ಮೂರನೇ ಬಾಯಿಯಿಂದ ತಿಳಿದುಕೊಳ್ಳುವ ಬದಲು ಹತ್ತಿರದಿಂದಲೇ ತಿಳಿದುಕೊಳ್ಳಬೇಕು ಎನ್ನುವ ಆಸೆ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಮೂಡಿದೆ. ಇದಕ್ಕಾಗಿ ಮತ ಎಣಿಕೆ ಕೇಂದ್ರಕ್ಕೆ ತೆರಳಲು ಪಾಸ್ಗಾಗಿ ಸ್ಥಳಿಯ ಮುಖಂಡರ ಬಳಿ ದುಂಬಾಲು ಬಿದ್ದಿದ್ದಾರೆ. ಎಣಿಕೆ ಏಜೆಂಟ್ ಒಂದು ಬೂತ್ಗೆ ಒಬ್ಬರೇ ಪ್ರವೇಶ ಪಡೆಯಲು ಸಾಧ್ಯವಾಗಿರುವ ಕಾರಣ, ಪಕ್ಷೇತರರಾಗಿ ಸ್ಪರ್ಧೆ ಮಾಡಿದವರೂ ಸೇರಿ ಸಾಧ್ಯವಿರುವ ಎಲ್ಲ ಮಾರ್ಗಗಳ ಮೂಲಕ ಪಾಸ್ ಪಡೆಯಲು ಯತ್ನಿಸುತ್ತಿದ್ದಾರೆ.
ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಚನ್ನಪಟ್ಟಣ ಕ್ಷೇತ್ರದವರಿಗಿಂತ ಹೊರಗಿನವರಿಂದಲೇ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದ್ದು, ರಿಯಾಯಿತಿ ದರದಲ್ಲಿ ಬೆಟ್ಟಿಂಗ್ಗೆ ಹಣ ಹೂಡಲು ಪ್ರೇರೇಪಿಸಲಾಗುತ್ತಿದೆ. ಅದರಲ್ಲು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಬೆಟ್ಟಿಂಗ್ ಕಟ್ಟುವವರೇ ಹೆಚ್ಚಿದ್ದು, ಕಾಂಗ್ರೆಸ್ನವರ ಒಂದು ಲಕ್ಷ ರೂ., ಗೆ ಜೆಡಿಎಸ್ ನವರು ಕೇವಲ 80 ಸಾವಿರ ರೂ ಕಟ್ಟಿದರೆ ಸಾಕು ಎನ್ನುವ ಆಹ್ವಾನವನ್ನು ನೀಡಲಾಗುತ್ತಿದೆ.
ನೆರೆಯ ಮದ್ದೂರು, ಮಂಡ್ಯ, ಕನಕಪುರ, ರಾಮನಗರ, ಮಾಗಡಿಯಲ್ಲೂ ಫಲಿತಾಂಶದ ಬಗ್ಗೆ ಬಾಜಿ ವ್ಯವಹಾರ ತಾರಕಕ್ಕೇರಿದೆ. ಹಾಸನ, ಮೈಸೂರು ಮತ್ತು ಬೆಂಗಳೂರಿನಿಂದಲೂ ಬಂದು ಬೆಟ್ಟಿಂಗ್ ಗೆ ಹಣ ಹೂಡುತ್ತಿರುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಬೂತ್ ಮಟ್ಟದಿಂದ ಆರಂಭಗೊಂಡು, ಗ್ರಾಪಂ, ತಾಪಂ ಹಾಗೂ ಜಿಪಂ ಮಟ್ಟದಲ್ಲಿಯೂ ಮತಗಳ ಗಳಿಕೆ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ.