ಚಿಕ್ಕಬಳ್ಳಾಪುರ: ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಬಿಟ್ಟು ಕೊಟ್ಟಿದ್ದು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯಲಾಗಿದೆ. ಹಾಗೆಯೇ ಮುಂಬರುವ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ. ಸಕ್ರಿಯ ಕಾರ್ಯಕರ್ತನಾಗಿಯೇ ಉಳಿಯಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದಲೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಲಾಗಿದೆ. ಇಲ್ಲಿನ ಪ್ರದೇಶದವರೊಂದಿಗೆ ಅವಿನವಭಾವ ಸಂಬಂಧವನ್ನು ಹೊಂದಲಾಗಿದೆ. ಈ ಬಾರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ. ನನಗೆ ಸಿಗಬೇಕಾದ ಟಿಕೆಟ್ ಅನ್ನು ಯುವ ನಾಯಕ ಎಂ.ಎಸ್.ರಕ್ಷಾ ರಾಮಯ್ಯಗೆ ಬಿಟ್ಟು ಕೊಡಲಾಗಿದೆ. ಮುಂಬರುವ ದಿನಗಳಲ್ಲಿ ನನ್ನ ಕೆಲಸವನ್ನು ಅವರು ಸಹ ಪ್ರಾಮಾಣಿಕವಾಗಿ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಪಕ್ಷವು ಒಳ್ಳೆಯ ಸ್ಥಾನಮಾನವನ್ನು ನೀಡಿದೆ. ಗೌರವಯುತ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ. ಇದಕ್ಕೆ ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸಕ್ರಿಯ ಕಾರ್ಯಕರ್ತನಾಗಿ, ಒಳ್ಳೆಯ ಸಾಹಿತಿಯಾಗಿ ಉಳಿಯಲಿದ್ದೇನೆ. ಪಕ್ಷದ ಸಂಘಟನೆಗೆ ಶ್ರಮಿಸಲಿದ್ದೇನೆ ಎಂದರು.
ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ಅವರ ತೀರ್ಮಾನವೇ ಅಂತಿಮ. ಇದರ ನಡುವೆ ಟಿಕೆಟ್ ಸಿಗದಿರುವುದಕ್ಕೆ ರಾಜ್ಯಸಭಾ ಸೇರಿದಂತೆ ಯಾವುದೇ ಸ್ಥಾನಮಾನ ನೀಡುವಂತೆ ಒತ್ತಾಯಿಸಿಲ್ಲ. ಯಾವುದೇ ಷರತ್ತನ್ನು ವಿಧಿಸಿಲ್ಲ. ಕಾರ್ಯಕರ್ತರು ಅಸಮಾಧಾನಪಡುವ ಅವಶ್ಯಕತೆಯೂ ಇಲ್ಲ ಎಂದು ತಿಳಿಸಿದರು.
ವಸುದೈವ ಕುಟುಂಬಕಂ ತತ್ವದಾಧಾರದ ಮೇಲೆಯೇ ಕಾಂಗ್ರೆಸ್ ನಡೆಯುತ್ತಿದೆ. ಇದಕ್ಕೆ ಮತ್ತಷ್ಟು ಬಲವನ್ನು ತಂದುಕೊಡಬೇಕು. ಮೊದಲು ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು. ಇಲ್ಲದಿದ್ದಲ್ಲಿ ಏಕತೆಯ ಅಸ್ತಿತ್ವ ಇರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮತ್ತಿತರರು ಇದ್ದರು.