ಮಂಡ್ಯ: ಜಿಲ್ಲೆಯಲ್ಲಿ ಬುಧವಾರ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಶೇ.82.30ರಷ್ಟು ಮತದಾನವಾಗಿದೆ. ಕೆಲವೆಡೆ ಸಣ್ಣಪಟ್ಟ ಗಲಾಟೆ ಬಿಟ್ಟರೆ ಉಳಿದಂತೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಅಂತೆಯೆ ಅಭ್ಯರ್ಥಿಗಳ ಹಣೆಬರಹವಿರುವ ಎಲ್ಲ ಮತಯಂತ್ರಗಳನ್ನು ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಸ್ಟ್ರಾಂಗ್ ರೂಂನಲ್ಲಿ ಭದ್ರಕೋಟೆಯ ನಡುವೆ ಇಡಲಾಗಿದೆ.
6 ಗಂಟೆವರೆಗೆ ನಡೆದ ಮತದಾನದ ಆಧಾರದ ಮೇಲೆ ಸರಾಸರಿ ಅಂಕಿ-ಅಂಶವನ್ನಷ್ಟೇ ನೀಡಲಾಗಿದೆ. ಆದರೆ ಕೆಲವೆಡೆ 7 ಗಂಟೆಯಾದರೂ ಮತದಾನದ ಪ್ರಕ್ರಿಯೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಂತಿಮ ಟ್ಯಾಬುಲೇಷನ್ ನಂತರ ನಿಖರ ಅಂಕಿ-ಅಂಶ ಗೊತ್ತಾಗಲಿದೆ. ಮತದಾನ ಅವಧಿಯನ್ನು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಿಗದಿಪಡಿಸಿದ ಹಾಗೂ ‘ಸ್ವೀಪ್’ ಆಂದೋಲನದ ಪರಿಣಾಮ ಮತದಾನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ.
ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.79.39, ಮದ್ದೂರಿನಲ್ಲಿ ಶೇ.82.71, ಮೇಲುಕೋಟೆಯಲ್ಲಿ ಶೇ.90.21, ಮಂಡ್ಯದಲ್ಲಿ ಶೇ. 75.69, ಶ್ರೀರಂಗಪಟ್ಟಣದಲ್ಲಿ ಶೇ.83.81, ನಾಗಮಂಗದಲ್ಲಿ ಶೇ.87.40 ಮತ್ತು ಕೆ.ಆರ್.ಪೇಟೆಯಲ್ಲಿ ಶೇ.82.83ರಷ್ಟು ಮತದಾನವಾಗಿದೆ.
ಬೆಳಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬೆಳಗ್ಗೆ 9ರ ಸಮಯದಲ್ಲಿ ಜಿಲ್ಲೆಯಲ್ಲಿ ಸರಾಸರಿ ಶೇ.5.85ರಷ್ಟು, 11 ಗಂಟೆ ವೇಳೆಗೆ ಶೇ.19.51, ಮಧ್ಯಾಹ್ನ 1ಕ್ಕೆ ಶೇ.39.38, ಮಧ್ಯಾಹ್ನ 3ರ ಸಮಯದಲ್ಲಿ ಶೇ.58.39 ಹಾಗೂ ಸಂಜೆ 5ರ ವೇಳೆಗೆ ಶೇ.75.90ರಷ್ಟು ಮತಗಳು ಚಲಾವಣೆಯಾಗಿದ್ದವು. ಕೆಲವೆಡೆ ಬಿರುಸಿನ ಮತದಾನ ನಡೆದರೆ, ಮತ್ತೆ ಕೆಲವೆಡೆ ಮತದಾರರ ಪ್ರತಿಕ್ರಿಯೆ ನೀರಸವಾಗಿತ್ತು. ಅಂತಹ ಮತಗಟ್ಟೆಗಳಿಗೆ ಆಗೊಬ್ಬ, ಈಗೊಬ್ಬರಂತೆ ಮತದಾರರು ಬಂದು ಮತ ಚಲಾವಣೆ ಮಾಡಿ ಹೋಗುತ್ತಿದ್ದರು. ಪರಿಣಾಮ ಮತಗಟ್ಟೆ ಸಿಬ್ಬಂದಿ ಮತ್ತು ಪೊಲೀಸರು ಮತದಾರರಿಗಾಗಿ ಕಾದು ಕುಳಿತುಕೊಳ್ಳುವ ವಾತಾವರಣ ಸೃಷ್ಟಿಯಾಗಿತ್ತು.
ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಅದರಲ್ಲೂ ಸಂಜೆ ನಂತರ ಕೆಲವು ಮತಗಟ್ಟೆಗಳಿಗೆ ಹೆಚ್ಚಿನ ಮತದಾರರು ಬಂದಿದ್ದರಿಂದ ನಿಗದಿತ ಅವಧಿಗಿಂತಲೂ ಹೆಚ್ಚು ಹೊತ್ತು ಮತದಾನ ನಡೆಯಿತು.
ನಗರ/ಪಟ್ಟಣ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲೇ ಮತದಾನ ಬಿರುಸಿನಿಂದ ಸಾಗಿತ್ತು. ಯುವಜನರು, ಮಹಿಳೆಯರು, ವೃದ್ಧರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಹನಕೆರೆ ಗ್ರಾಮದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಪಿ.ರವಿಕುಮಾರ್‌ಗೌಡ ಅವರು ಶಿವಪುರ ಗ್ರಾಮ, ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ, ಸ್ವಾಭಿಮಾನಿ ಪಡೆ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಅವರು ಮಂಡ್ಯ ನಗರ, ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಅವರು ಹುಟ್ಟೂರು ಮಂಡ್ಯ ತಾಲೂಕು ಬೊಮ್ಮನಹಳ್ಳಿ ಗ್ರಾಮದಲ್ಲಿ ಮತ ಚಲಾಯಿಸಿದರು.