ಬೆಂಗಳೂರು ಹಾಲು ಒಕ್ಕೂಟದ ಕೇಂದ್ರ ಕಚೇರಿ. 
ಜಿಲ್ಲೆ

ಮೇ 25ಕ್ಕೆ ಬಮುಲ್‌ಗೆ ಚುನಾವಣೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

14 ಕ್ಷೇತ್ರಗಳಿಗೆ ಮತದಾನ ಕೆಎಂಎಫ್‌ನಲ್ಲೇ ಬಲಿಷ್ಠ ಒಕ್ಕೂಟದ ಗಾದಿಗಾಗಿ ಅಖಾಡ ಸಿದ್ಧ

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ: ರಾಜ್ಯದ ಪ್ರತಿಷ್ಠಿತ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಯ 15 ಒಕ್ಕೂಟಗಳಲ್ಲಿಯೇ ಬಲಿಷ್ಠವಾದ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ(ಬಮುಲ್)ದ ಚುನಾವಣೆಗೆ ವರ್ಷದ ಬಳಿಕ ಮುಹೂರ್ತ ಫಿಕ್ಸ್ ಆಗಿದ್ದು, ಮೇ 25ರಂದು ಮತದಾನ ನಡೆಯಲಿದೆ.

2024ರ ಮಾರ್ಚ್‌ನಲ್ಲೇ ಕಾರ್ಯಕಾರಿ ಮಂಡಳಿಯ ಅವಧಿ ಮುಕ್ತಾಯವಾಗಿದ್ದರೂ ಲೋಕಸಭೆ ಚುನಾವಣೆ, ವಿಧಾನಪರಿಷತ್ ಚುನಾವಣೆ ಸೇರಿ ಹಲವು ಕಾರಣದಿಂದಾಗಿ ಚುನಾವಣೆ ನಡೆದಿರಲಿಲ್ಲ. ಈಗ ಬಮುಲ್‌ನ 14 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ನಿರ್ದೇಶಕರಾಗಲು ಬಯಸಿರುವ ಆಕಾಂಕ್ಷಿತರು ಆಯಾ ಪಕ್ಷಗಳ ನಾಯಕರ ಮನವೊಲಿಸಲು ಕಸರತ್ತು ಶುರುವಿಟ್ಟುಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ಕ್ಷೇತ್ರಗಳಾದ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಬೆಂಗಳೂರು ನಗರ ಜಿಲ್ಲೆಯ 4 ಕ್ಷೇತ್ರಗಳಾದ ಬೆಂಗಳೂರು ಉತ್ತರ, ಪೂರ್ವ, ದಕ್ಷಿಣ ಮತ್ತು ಆನೇಕಲ್ ಹಾಗೂ ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ, ಮಾಗಡಿ, ಕುದೂರು ಸೇರಿ ಒಟ್ಟು 14 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

ಯಾರು ಮತದಾನ ಮಾಡಬಹುದು?: ಎಂಪಿಸಿಎಸ್ ಸಂಘಗಳ ಅಧ್ಯಕ್ಷರು ಮತದಾನ ಮಾಡಬಹುದು. ಬಮುಲ್ ಸರ್ವಸದಸ್ಯರ ಸಭೆಯಲ್ಲಿ ಎಂಪಿಸಿಎಸ್‌ನ ಪ್ರತಿನಿಧಿಗಳು ಕಡ್ಡಾಯವಾಗಿ 5 ವರ್ಷ ಭಾಗವಹಿಸಿರಬೇಕು. ಅಲ್ಲದೆ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿರಬೇಕು. ಇಂತಹ ಸಂಘಗಳು ಮತ್ತು ಕೆಲ ಸಂಘಗಳು ಸೂಪರ್‌ಸೀಡ್ ಆಗಿದ್ದರೆ, ಸಂಘಗಳಿಗೆ ಬಮುಲ್‌ನ ಅಧಿಕಾರಿ ಆಡಳಿತಾಧಿಕಾರಿಯಾಗಿ ನೇಮಕವಾಗಿರುವ ಸಂಘಗಳು ಚುನಾವಣೆಯಲ್ಲಿ ಪಾಲ್ಗೊಳ್ಳಬಹುದು. ಸದ್ಯ ತಾಲೂಕಿನಲ್ಲಿ 207 ಸಂಘಗಳಿದ್ದು, ಒಂದು ಅಥವಾ ಎರಡು ಸಂಘಗಳು ಹೊರತುಪಡಿಸಿ 205 ಸಂಘಗಳ ಪ್ರತಿನಿಧಿಗಳು ಮತಚಲಾವಣೆ ಮಾಡಲಿದ್ದಾರೆ.

ಬಿಜೆಪಿ, ಜೆಡಿಎಸ್ ಮೈತ್ರಿ?: ತಾಲೂಕಿನ ಬಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಪ್ರತಿ ಬಾರಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದ ಕಾರಣ ತ್ರಿಕೋನ ಸ್ಪರ್ಧೆ ಇತ್ತು. ಆದರೀಗ ಲೋಕಸಭೆ, ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಸಾಧಿಸಿರುವ ಕಾರಣ ಬಮುಲ್ ನಿರ್ದೇಶಕರ ಚುನಾವಣೆಯಲ್ಲಿಯೂ ಮೈತ್ರಿ ಧರ್ಮಪಾಲನೆಯಾಗುವ ಸಾಧ್ಯತೆಗಳಿವೆ. ಇನ್ನು ಆಡಳಿತಾರೂಢ ಕಾಂಗ್ರೆಸ್ ಗೆಲ್ಲುವ ಉಮೇದಿನಲ್ಲಿದೆ.

ಬದಲಾದ ಲೆಕ್ಕಾಚಾರಈ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದ ದಿ.ಅಪ್ಪಯ್ಯಣ್ಣ, ಕಾಂಗ್ರೆಸ್‌ನಿಂದ ಬಿ.ಸಿ.ಆನಂದ್ ಕುಮಾರ್ ಸ್ಪರ್ಧೆಗಿಳಿದು, ಕಾಂಗ್ರೆಸ್‌ನ ಆನಂದ್ ಕುಮಾರ್ ಜಯಭೇರಿ ಬಾರಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆನಂದ್ ಕುಮಾರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗಳಿಯುವ ಸಾಧ್ಯತೆಗಳಿವೆ. ಕಾಂಗ್ರೆಸ್‌ನಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.