ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿಯ ಉದ್ಘಾಟನೆಯನ್ನು ಚುನಾವಣಾ ತಹಸೀಲ್ದಾರ್ ಪಿ.ಜಿ. ಪವಾರ ನೆರವೇರಿಸಿದರು. ಎಡಿಸಿ ಸೋಮನಿಂಗ ಗೆಣ್ಣೂರ, ಎಸಿ ಗುರುನಾಥ ದಡ್ಡೆ, ಮಹೇಶ ಪೋತದಾರ ಮತ್ತಿತರರಿದ್ದಾರೆ.  
ಜಿಲ್ಲೆ

ನುಲಿಯ ಚಂದಯ್ಯ ಜಯಂತಿ ಆಚರಣೆ, ಶರಣರ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದ ಚುನಾವಣಾ ತಹಸೀಲ್ದಾರ್ ಪಿ.ಜಿ. ಪವಾರ

ವಿಜಯಪುರ: ತಮ್ಮ ಬದುಕಿನ ಮೂಲಕವೇ ಕಾಯಕ ತತ್ವಗಳನ್ನು ಜಗತ್ತಿಗೆ ಸಾರಿದ ಶರಣರ ಆದರ್ಶ ವಿಚಾರಗಳು ನಮಗೆ ದಾರದೀಪವಾಗಿವೆ. 12ನೇ ಶತಮಾನದಲ್ಲಿಯೇ ಕಾಯಕ ತತ್ವ ಸಾರಿದ ಶರಣರ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಚುನಾವಣಾ ತಹಸೀಲ್ದಾರ್ ಪಿ.ಜಿ. ಪವಾರ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿಯ ಉದ್ಘಾಟನೆ ನೆವರೇರಿಸಿ ಅವರು ಮಾತನಾಡಿದರು.

ಶರಣರು ತಮ್ಮ ವಚನಗಳ ಮೂಲಕ ಈ ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಶರಣರ ವಚನಗಳ ತಿರುಳು ಅರಿತು ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಡಾ.ಮಾಧವ ಎಚ್.ಗುಡಿ ಉಪನ್ಯಾಸ ನೀಡುತ್ತಾ, ನುಲಿಯ ಚಂದಯ್ಯ ಅವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಯ ಕೆಲಸ ಮಾಡಿದರು. ಸತ್ಯ, ಶುದ್ಧ ಕಾಯಕ ಸಂದೇಶ ರವಾನಿಸಿದರು. ಅಸಮಾನತೆಯನ್ನು ಹೋಗಲಾಡಿಸಿದರೆಂದು ಹೇಳಿದರು.

ಮುಖಂಡ ಗೋವಿಂದ ವಾಜಂತ್ರಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು. ಜಿಪಂ ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಮತ್ತಿತರರಿದ್ದರು. ಗಿರಿಮಲ್ಲಪ್ಪ ಸತ್ಯಪ್ಪ ಬಜಂತ್ರಿ ಅವರು ಶಹನಾಯ್ ವಾದನ ಮತ್ತು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.