ಜಿಲ್ಲೆ

ಗೊಂದಲಗಳಿಗೆ ಅವಕಾಶ ನೀಡದಿರಿ ; ಗ್ರಾಪಂ ಚುನಾವಣೆ ಅಧಿಕಾರಿಗಳಿಗೆ ಡಿಸಿ ಸತ್ಯಭಾಮ ಸೂಚನೆ

Kolar

ಕೋಲಾರ : ಪ್ರಜಾಪ್ರಭುತ್ವ ಉಳಿಸುವ ಚುನಾವಣಾ ಕಾರ್ಯದಲ್ಲಿ ಶ್ರದ್ಧೆ ಇರಲಿ, ಗೊಂದಲಗಳಿಗೆ ಅವಕಾಶವಿಲ್ಲದಂತೆ ನ್ಯಾಯಸಮ್ಮತ ಚುನಾವಣೆಯನ್ನು ಹಬ್ಬದಂತೆ ನಡೆಸಿಕೊಡಿ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕರೆ ನೀಡಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿಗೆ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ನಮಗೆ ಎಲ್ಲ ಗೊತ್ತು ಎಂಬ ಅತಿಯಾದ ಆತ್ಮವಿಶ್ವಾಸ ಬೇಡ, ಕಲಿಕೆ ನಿರಂತರ, ಕಲಿತಷ್ಟು ಕರ್ತವ್ಯದಲ್ಲಿ ಪ್ರಾವಿಣ್ಯತೆ ಹೆಚ್ಚುತ್ತದೆ. ತರಬೇತಿಯಲ್ಲಿ ಕಲಿತ ಮೇಲೆ ಅದನ್ನು ಮತ್ತೊಬ್ಬರಿಗೆ ಹೇಳಿಕೊಡುವಷ್ಟು ಜ್ಞಾನ ಪಡೆಯಬೇಕು ಎಂದರು.

ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳು ತಿರಸ್ಕೃತಗೊಂಡಿತ್ತು. ಬಂಗಾರಪೇಟೆಯ ಮತಗಟ್ಟೆಯೊಂದರಲ್ಲಿ ಮತಪತ್ರಗಳನ್ನು ಮತಪೆಟ್ಟಿಗೆ ಒತ್ತಡದಿಂದ ತುಂಬಿದ್ದರಿಂದ ಎಣಿಕೆ ಕಾರ್ಯದಲ್ಲಿ ಅಡಚಣೆಯಾಗಿತ್ತು. ಮಾಡುವ ಕೆಲಸ ಉತ್ತಮವಾಗಿರಲಿ, ಶ್ರದ್ಧೆ, ತಾಳ್ಮೆ ಅಗತ್ಯವಿದೆ, ಚುನಾವಣಾ ಕೆಲಸವೆಂದರೆ ಕೆಲವರಿಗೆ ಏನೋ ಕಷ್ಟ, ಅದು ಸರಿಯಲ್ಲ. ನೀವು ತರಬೇತಿಯಲ್ಲಿ ಚೆನ್ನಾಗಿ ಅರಿತರೆ ಚುನಾವಣೆ ಹಬ್ಬದಂತೆ ಸಡಗರದಿಂದ ಆಚರಿಸಬಹುದು ಎಂದರು.

ಮತಗಟ್ಟೆಗಳಲ್ಲಿ ಹೊಣೆಯರಿತು ಕೆಲಸ ಮಾಡಿ, ಗ್ರಾಪಂ ಚುನಾವಣೆ ಜಿದ್ದಾಜಿದ್ದಿನ ಕಣವಾಗಿರುವುದರಿಂದ ಪ್ರತಿ ಮತವೂ ಮಹತ್ವದ್ದಾಗಿದೆ, ಗುರುತಿನ ಚೀಟಿ ನೋಡಿಯೇ ಮತದಾನಕ್ಕೆ ಅವಕಾಶ ಕಲ್ಪಿಸಿ, ತಪ್ಪು ನಿಮ್ಮಿಂದಾಗಬಾರದು ಎಂದರು.

ಮತಗಟ್ಟೆಯಲ್ಲಿ ನಿರ್ವಹಣೆ ಕಾನೂನು ಬದ್ಧವಾಗಿರಲಿ, ನಿಮಗೆ ಊಟಕ್ಕೆ ಸ್ಥಳೀಯ ಅಂಗನವಾಡಿ, ಬಿಸಿಯೂಟ ನೌಕರರ ನೆರವು ಪಡೆಯಲಾಗಿದೆ. ಆಮಿಷಗಳಿಗೆ ಒಳಗಾಗುವುದು ಬೇಡ ಎಂದು ಕಿವಿಮಾತು ಹೇಳಿದರು.

ಮತಗಟ್ಟೆಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದ ಮಾತ್ರಕ್ಕೆ ಅಜಾಗರೂಕತೆ ಬೇಡ, ಮತಗಟ್ಟೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಲು ತಿಳಿಸಿ, ಬಾಗಿಲಲ್ಲೇ ಆಶಾ ಕಾರ್ಯಕರ್ತೆಯರಿದ್ದು, ಸ್ಯಾನಿಟೈಸರ್ ನೀಡಿ ಥರ್ಮಲ್ ಸ್ಕ್ರೀನಿಂಗ್ ನಡೆಸುತ್ತಾರೆ ಎಂದರು.

ಸೋಂಕಿತರಿಗೂ ಅವಕಾಶ : ಕೋವಿಡ್ ಸೋಂಕಿತರಿಗೂ ಮತದಾನದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಪಿಪಿಇ ಕಿಟ್ ಧರಿಸಿ ಸಂಜೆ 4ರಿಂದ 5 ಗಂಟೆ ನಡುವೆ ಮತದಾನದ ಕೊನೇ ಅವಧಿಯಲ್ಲಿ ಮತ ಹಾಕಲು ಅವಕಾಶ ಕಲ್ಪಿಸಿ ಎಂದರು. ತರಬೇತುದಾರ ಉಪನ್ಯಾಸಕ ಗೋಪಿಕೃಷ್ಣನ್ ಚುನಾವಣಾ ಸಿಬ್ಬಂದಿಗೆ ಇಡೀ ದಿನ ತರಬೇತಿ ನೀಡಿ, ಸಮಸ್ಯೆಗಳಿಗೆ ಪರಿಹಾರ ನೀಡಿದರಲ್ಲದೇ ಮತಪೆಟ್ಟಿಗೆ ಸಿದ್ದಪಡಿಸುವಿಕೆ ಕುರಿತು ಮಾರ್ಗದರ್ಶನ ನೀಡಿದರು.ತರಬೇತುದಾರರಾದ ನಾರಾಯಣಸ್ವಾಮಿ,ಡಾ. ಸೀನಪ್ಪ, ಡಾ.ಹೆಚ್.ಆರ್.ಮಂಜುನಾಥ್, ಅಂಚೆ ಮತಪತ್ರಗಳ ನಿರ್ವಹಣೆ ಉಸ್ತುವಾರಿ ಅಧಿಕಾರಿ ರೂಪಾದೇವಿ ಉಪಸ್ಥಿತರಿದ್ದರು.

ಚುನಾವಣಾ ಸಿಬ್ಬಂದಿಗೆ ಮತಗಟ್ಟೆಗಳಲಿ ಕಾರ್ಯನಿರ್ವಹಿಸುವಾಗ ವಹಿಸಬೇಕಾದ ಮುಂಜಾಗ್ರತೆಗಳ ಕುರಿತು ಮಾರ್ಗದರ್ಶನ ನಿಡಲಾಗಿದೆ. ಶೋಭಿತಾ, ತಹಸೀಲ್ದಾರ್