ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಜಿಲ್ಲೆಯ ನಾಲ್ಕೂ ಮತಕ್ಷೇತ್ರಗಳಲ್ಲೂ ಪೂರ್ವ ಸಿದ್ದತೆ ಪೂರ್ಣಗೊಂಡಿದೆ, ಜಿಲ್ಲೆಯ ಮತದಾರರರು ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಮನವಿ ಮಾಡಿದರು.
ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣೆ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 4,35,835 ಪುರುಷ ಮತದಾರರು, 4,41,907 ಮಹಿಳಾ ಮತದಾರರು ಹಾಗೂ 148 ಇತರೆ ಸೇರಿ 8,77,890 ಮತದಾರಿದ್ದಾರೆ. ಜಿಲ್ಲೆಯಲ್ಲಿ 130 ಸೇವಾ ಮತದಾರರು, 24,713 ಯುವ ಮತದಾರರು, 12143 ವಿಕಲಚೇತನ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 20,354 ಮತದಾರರಿದ್ದಾರೆ. ಎಲ್ಲ ಮತದಾರರಿಗೂ ಮತದಾರರ ಮಾರ್ಗದರ್ಶಿ ಮತ್ತು ವೋಟರ್ ಇನ್ಫಾರ್ಮೇಷನ್ ಸ್ಲಿಪ್ ವಿತರಿಸಲಾಗಿದೆ ಎಂದರು.
ನಾಲ್ಕು ವಿಧಾನಸಭಾ ಕ್ಷೇತ್ರಗಳ, ಚುನಾವಣೆಯ ಅಂತಿಮ ಕಣದಲ್ಲಿ 50 ಪುರುಷರು ಹಾಗೂ 6 ಮಹಿಳೆಯರು ಸೇರಿ 56 ಅಭ್ಯರ್ಥಿಗಳಿದ್ದಾರೆ. 1137 ಮತಗಟ್ಟೆಗಳಿವೆ. ನಗರ ಪ್ರದೇಶದಲ್ಲಿ 879 ಹಾಗೂ ಗ್ರಾಮೀಣ ಪ್ರದೇಶದಲ್ಲಿ 258 ಮತಗಟ್ಟೆಗಳಿವೆ. 1,137 ಮತಗಟ್ಟೆಗಳಿಗೆ 1470 ಪಿಆರ್‌ಒ, 1,499 ಎಪಿಆರ್‌ಒ, 2,929 ಹಾಗೂ 285 ಮೈಕ್ರೋ ಅಬ್ಸರ್‌ರ್ವಸ್ ನೇಮಿಸಲಾಗಿದೆ. 569 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು ಎಂದರು.
ಎಲ್ಲೆಲ್ಲಿ ಮತಗಟ್ಟೆ?
ಹೊಸಕೋಟೆಗೆ ಸಂಬಂಧಿಸಿದಂತೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೇವನಹಳ್ಳಿ ಬಿಬಿ ರಸ್ತೆಯ, ಹೊಸ ಬಸ್ಸ್ಟ್ಯಾಂಡ್ ಎದುರಿನ ಸರ್ಕಾರಿ ಕಿರಿಯ ಕಾಲೇಜು, ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರ ಹಾಗೂ ನೆಲಮಂಗಲ ಟೌನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರವನ್ನಾಗಿ ಗುರುತಿಸಲಾಗಿದೆ ಎಂದು ಡಿಸಿ ತಿಳಿಸಿದರು.
ಇಂದು ಸಿಬ್ಬಂದಿ ಹಾಜರಿ: ಮತಗಟ್ಟೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು, ಸಿಬ್ಬಂದಿ ಮೇ 9 ರಂದು ಬೆಳಗ್ಗೆ ಮಸ್ಟರಿಂಗ್ ಕೇಂದ್ರಗಳಿಗೆ ಹಾಜರಾಗಲಿದ್ದಾರೆ. ನಂತರ ಮತಗಟ್ಟೆಗಳಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಚುನಾವಣಾ ಸಾಮಾಗ್ರಿಗಳೊಂದಿಗೆ ಸಂಬಂಧಿಸಿದ ಮತಗಟ್ಟೆಗಳಿಗೆ ಮಧ್ಯಾಹ್ನ 3 ಗಂಟೆ ವೇಳೆಗೆ ತೆರಳಲಿದ್ದಾರೆ ಎಂದು ಲತಾ ತಿಳಿಸಿದರು.
ಪ್ರಚಾರ ನಿಷೇಧ:
ಮೇ 8 ರ ಸಂಜೆ 6 ಗಂಟೆಯಿಂದ ಚುನಾವಣಾ ಬಹಿರಂಗ ಪ್ರಚಾರ ನಿಷೇಧಿಸಲಾಗಿದ್ದು, ದಂಡ ಪ್ರಕ್ರಿಯೆ ಸಂಹಿತೆ ರಡಿ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಆದೇಶಿಸಲಾಗಿದೆ. ಮತದಾನ ಕೊನೆಗೊಳ್ಳಲು ನಿಗದಿಪಡಿಸಿದ ಅವಧಿ ಮುಕ್ತಾಯಗೊಳ್ಳುವ ಅವಧಿಯಲ್ಲಿ 5 ಜನ ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳಲು ಅವಕಾಶವಿರುತ್ತದೆ. 8 ರಂದು ಸಂಜೆ 6 ಗಂಟೆಯಿಂದ 10 ರಂದು ಮತದಾನ ಮತದಾನ ಮುಕ್ತಾಯವಾಗುವವರೆಗೆ ನಾಲ್ಕೂ ವಿಧಾನಸಭಾ ಕ್ಷೇತ್ರಾದ್ಯಂತ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿ ಷರತ್ತಿಗೊಳಪಡಿಸಿ, ನಿಷೇಧಾಜ್ಞೆ ವಿಧಿಸಲಾಗಿದೆ.
ಮದ್ಯ ಮಾರಾಟ ನಿಷೇಧ:
ಮೇ 10 ರಂದು ಮತದಾನ ಹಾಗೂ ಮೇ 13 ರಂದು ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ 8 ರಂದು ಸಂಜೆ 5 ಗಂಟೆಯಿಂದ ಮೇ 11 ರಂದು ಬೆಳಗ್ಗೆ 6 ಗಂಟೆಯವರೆಗೆ ಹಾಗೂ ಮೇ 13 ರಂದು ಬೆಳಗ್ಗೆ 6 ಗಂಟೆಯಿಂದ ಮೇ 14 ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಸಾಗಣೆ, ವಿತರಣೆ ಮತ್ತು ಮಾರಾಟ ನಿಷೇಧಿಸಲಾಗಿದೆ ಎಂದು ಡಿಸಿ ತಿಳಿಸಿದರು.
ಬಿಗಿ ಪೊಲೀಸ್ ಭದ್ರತೆ:
ಮತದಾನ ದಿನದಂದು ಪೊಲೀಸ್ ಸಿಬ್ಬಂದಿಯೊಂದಿಗೆ 400 ಹೋಂಗಾರ್ಡ್, ಸಶಸ್ತ್ರ ಮೀಡಲು ಪಡೆ ಸಿಬ್ಬಂದಿ ಹಾಗೂ ಕೆಎಸ್‌ಆರ್‌ಪಿ ಸಿಬ್ಬಂದಿ ನೇಮಕ ಮಾಡಲಾಗಿದೆ, ಜಿಲ್ಲೆಗೆ 11 ಸಶಸ್ತ್ರ ಪಡೆ ಪೂರೈಸಲಾಗಿದೆ, ಮತ ಎಣಿಕೆ ದಿನದಂದು ಆಕಾಶ್ ಇಂಟರ್ ನ್ಯಾಷನಲ್ ಶಾಲೆಯ ಸುತ್ತಮುತ್ತ ಮೂರು ಸುತ್ತಿನ ಭದ್ರತೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಮತದಾನ ಪ್ರಮಾಣ ಹೆಚ್ಚಳ:
ಮತದಾನ ಪ್ರಮಾಣ ಹೆಚ್ಚಿಸಲು ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ ಚಟುವಟಿಕೆಗಳನ್ನು ಹಮ್ಮಿಕೊಂಡು ಮತದಾನದ ಪ್ರಾಮುಖ್ಯತೆ, ಜಾಗೃತಿ ಮೂಡಿಸಲಾಗಿದೆ ಎಂದು ಜಿಪಂ ಸಿಇಒ ವರ್ಣೀತ್ ನೇಗಿ ತಿಳಿಸಿದರು. ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಶಾಮಿಯಾನ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಗೃಹ, ಗಾಲಿ ಕುರ್ಚಿ, ಅಗತ್ಯವಿರುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದರು. ಮತದಾರರ ಆಕರ್ಷಿಸಲು ತಲಾ 5 ರಂತೆ 20 ಮಹಿಳಾ(ಸಖಿ) ಮತಗಟ್ಟೆಗಳು, ತಲಾ 1 ರಂತೆ 4 ವಿಕಲಚೇತನ ಮತಗಟ್ಟೆಗಳು, ತಲಾ 1 ರಂತೆ 4 ಯುವ ಮತಗಟ್ಟೆಗಳು, ತಲಾ 1 ರಂತೆ 4 ಎಥ್ನಿಕ್ ಮತಗಟ್ಟೆಗಳು ಹಾಗೂ ತಲಾ 1 ರಂತೆ 4 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.