ಮಂಡ್ಯ: ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರ ಆಯ್ಕೆಗೆ ಜು.21ರಂದು ಚುನಾವಣೆ ನಡೆಯಲಿದೆ ಎಂದು ಉಪಚುನಾವಣಾಧಿಕಾರಿ ಕೆ.ಎಸ್.ಷಡಕ್ಷರಿ ಹೇಳಿದರು.
ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ನಾಗಮಂಗಲ ತಾಲೂಕಿಗೆ ಸಂಬಂಧಿಸಿದಂತೆ ನಗರದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ, ಮಳವಳ್ಳಿ ತಾಲೂಕಿಗೆ ಸಂಬಂಧಿಸಿದಂತೆ ಮಳವಳ್ಳಿ ಪಟ್ಟಣದ ಬಸವೇಶ್ವರ ಪತ್ತಿನ ಸಹಕಾರ ಸಂಘ, ಕೆ.ಆರ್.ಪೇಟೆ ಹೊಸಹೊಳಲು ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜು ಮತ್ತು ಪಾಂಡವಪುರ ಫ್ರೆಂಚ್ ರಾಕ್ಸ್ ಶಾಲೆಯಲ್ಲಿ ಅಂದು ಬೆಳಗ್ಗೆ 8ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಅದೇ ದಿನ ಮತ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ 4,025 ಮತದಾರರಿದ್ದಾರೆ. ಅಧ್ಯಕ್ಷ ಸ್ಥಾನ, ಕಾರ್ಯನಿರ್ವಾಹಕ ಸದಸ್ಯ ಸ್ಥಾನಕ್ಕೆ 20 ಹಾಗೂ ಮಹಿಳಾ ಮೀಸಲು ಸ್ಥಾನಕ್ಕೆ 10 ಸೇರಿದಂತೆ ಒಟ್ಟು 31 ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಪ್ರತಿ ಮತದಾರರು 31 ಮತ ಚಲಾಯಿಸಬಹುದು. ಸದಸ್ಯರು ಮತದಾನಕ್ಕೆ ಬರುವಾಗ ಯಾವುದಾದರೂ ಭಾವಚಿತ್ರವಿರುವ ಗುರುತಿನ ಚೀಟಿ ಜತೆಗೆ ಮತದಾರ ಪಟ್ಟಿಯ ಕ್ರಮಸಂಖ್ಯೆ, ನೋಂದಣಿ ಸಂಖ್ಯೆಯನ್ನು ಮತಗಟ್ಟೆ ಅಧಿಕಾರಿಗೆ ನೀಡಬೇಕು ಎಂದರು.
ಸಹಾಯಕ ಚುನಾವಣಾಧಿಕಾರಿಗಳಾದ ರಮೇಶ್, ಜವರೇಗೌಡ ಇದ್ದರು.